ಉದಯವಾಹಿನಿ, ಗಾಝಿಯಾಬಾದ್: ಉತ್ತರ ಪ್ರದೇಶದ ಗಾಝಿಯಾಬಾದ್ ನಗರದ ಥಾನಾ ಶಹರ್ ವ್ಯಾಪ್ತಿಯ ಕೈಲಾ ಭಟ್ಟ ಚೌಕಿ ಪ್ರದೇಶದಲ್ಲಿ ಮುಸ್ಲಿಮರು ನಡೆಸುವ ಮಾಂಸದ ಖಾದ್ಯ ಮಾರಾಟ ಮಳಿಗೆಯ ವೃದ್ಧ ವ್ಯಾಪಾರಿಯೊಬ್ಬರಿಗೆ, ಮಂಗಳವಾರ ಅಂಗಡಿ ತೆರೆದರೆ ಬೆಂಕಿ ಹಚ್ಚುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹಾಪುರ್ ಮೋಡ್ ಫೈಓವರ್ ಸಮೀಪದ ಮಾಂಸಾಹಾರಿ ಖಾದ್ಯ ಮಾರಾಟ ಮಳಿಗೆಗೆ ನುಗ್ಗಿದ ವ್ಯಕ್ತಿಯೊಬ್ಬ “ಮಂಗಳವಾರ ನೀವು ಅಂಗಡಿ ತೆರೆದರೆ ಅದಕ್ಕೆ ಬೆಂಕಿ ಹಚ್ಚುತ್ತೇನೆ” ಎಂದು ಅವಾಚ್ಯ ಶಬ್ದಗಳನ್ನು ಬಳಸಿ ಬೆದರಿಕೆ ಹಾಕಿರುವುದು ವೀಡಿಯೋದಲ್ಲಿ ಕೇಳಿಬರುತ್ತದೆ. ದೇವಸ್ಥಾನದ ಸಮೀಪ ಮಂಗಳವಾರ ಮಾಂಸ ಮಾರಾಟ ಮಾಡಬಾರದು ಎಂದು ಆತ ಆಕ್ಷೇಪ ವ್ಯಕ್ತಪಡಿಸಿದ್ದಾನೆ.
