ಉದಯವಾಹಿನಿ, ಚಿಕ್ಕೋಡಿ: ದ್ವಿತೀಯ ಪಿಯುಸಿ ಪರೀಕ್ಷೆ ಇಂದಿನಿಂದ ಶುರುವಾಗುತ್ತಿದ್ದು, ಈ ಬಾರಿ 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಎಲ್ಲರೂ ಬೆಳಗ್ಗೆಯೇ ಸಂತಸದಿಂದ ಪರೀಕ್ಷೆಗೆ ಹಾಜರಾಗಿದ್ದಾರೆ. ಆದ್ರೆ ಚಿಕ್ಕೋಡಿಯ ಬಂಬಲವಾಡ ಗ್ರಾಮದಲ್ಲಿ ನಡೆದಿದ್ದೇ ಬೇರೆ. ಸಕಲ ತಯಾರಿ ಮಾಡಿಕೊಂಡು, ಭವಿಷ್ಯದ ನೂರಾರು ಕನಸು ಕಟ್ಟಿಕೊಂಡು ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬಂಬಲವಾಡ ಗ್ರಾಮದಲ್ಲಿ ಭೂಮಿಕಾ ಮಾಳಂಗಿ (17) ಮೃತ ದುರ್ದೈವಿ.
ಪರೀಕ್ಷೆಗೆ ಸಕಲ ತಯಾರಿ ಮಾಡಿಕೊಂಡಿದ್ದ ಭೂಮಿಕಾ ಇಂದು ಉತ್ಸಾಹದಿಂದಲೇ ಪರೀಕ್ಷೆಗೆ ಹೊರಡಲು ತಯಾರಾಗಿದ್ದರು. ಆದ್ರೆ ವಿಧಿಯ ಆಟ ಬೇರೆಯೇ ಆಗಿತ್ತು. ಸ್ನಾನ ಮುಗಿಸಿ ಮನೆಯಿಂದ ಹೊರಬರುತ್ತಿದ್ದಾಗಲೇ ಹಠಾತ್ತನೇ ಹೃದಯಾಘಾತ ಸಂಭವಿಸಿದೆ. ಕೂಡಲೇ ಪೋಷಕರು ಆಕೆಯನ್ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು, ಆದಾಗ್ಯೂ ಮಾರ್ಗ ಮಧ್ಯೆಯೇ ಅಸುನೀಗಿದ್ದಾರೆ. ದುರ್ಘಟನೆಯಿಂದ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
