ಉದಯವಾಹಿನಿ, ಬೆಂಗಳೂರು: ಹೊರೆಯಾದರೂ ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನ ಈಡೇರಿಸಬೇಕು. ಇಲ್ಲದಿದ್ರೆ ಗ್ಯಾರಂಟಿ ಬಗ್ಗೆ ಹೇಳುವ ಮುಂಚಿತವಾಗಿ, ಮಾತು ಕೊಡೋದಕ್ಕಿಂತ ಮುಂಚಿತವಾಗಿ ಚಿಂತನೆ ಮಾಡಬೇಕಾಗಿತ್ತು ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದರು. ಇತ್ತೀಚೆಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆ ಆಗ್ತಿದೆ ಎಂದು ಹೇಳಿದ್ದರು. ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ನಮ್ಮ ವಾಗ್ದಾನ. ಕರ್ನಾಟಕದ ಜನರಿಗೆ ಕೊಟ್ಟ ವಾಗ್ದಾನ, ಆ ವಾಗ್ದಾನದಂತೆ ನಡೆಯಬೇಕು ಎಂದರು.
ಯಾರು ಚುನಾವಣೆ ಎದುರಿಸಿದ್ರೋ ಅವರೆಲ್ಲ ಜನರಿಗೆ ನಂಬಿಕೆ ಕೊಟ್ಟಿದ್ದಾರೆ. ಹೊರ ಆದ್ರೂ ಆಗಲಿ, ಏನಾದರೂ ಆಗ್ಲಿ ಕೊಟ್ಟ ಮಾತನ್ನ ಈಡೇರಿಸಲೇಬೇಕು. ಹೊರೆ ಆಗುತ್ತೆ ಅನ್ನೋದಾದ್ರೆ ಗ್ಯಾರಂಟಿ ಬಗ್ಗೆ ಹೇಳುವ ಮುನ್ನ, ಮಾತು ಕೊಡೋದಕ್ಕಿಂತ ಮುಂಚಿತವಾಗಿ ಚಿಂತನೆ ಮಾಡಬೇಕಾಗಿತ್ತು. ಈಗ ಮಾತು ಕೊಟ್ಟಾಗಿದೆ, ಅದರಂತೆ ನಡೆದುಕೊಳ್ಳಬೇಕು. 5 ವರ್ಷಗಳ ಕಾಲ ಏನೇ ಕಷ್ಟ ಆದ್ರೂ ಆ ಗ್ಯಾರಂಟಿಗಳನ್ನ ರಾಜ್ಯದ ಜನರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಮುಂದುವರಿದು ಮಾತನಾಡಿದ ಡಿಕೆಸು, ಸಿರಿವಂತರು ಗ್ಯಾರಂಟಿ ತೆಗೆದುಕೊಳ್ತಿದ್ರೆ ಅದು ತಪ್ಪು ಎಂದು ಆಕ್ಷೇಪಿಸಿದರು. ಗ್ಯಾರಂಟಿ ಯೋಜನೆ ಯಾರು ಅಸಹಾಯಕರು, ಜೀವನ ನಡೆಸಲು ಕಷ್ಟವಿದೆ, ಯಾರು ಬದುಕಲ್ಲಿ ಹೋರಾಟ ಮಾಡ್ತಿದ್ದಾರೆ, ಅಂಥವರಿಗೆ ಆ ಯೋಜನೆಗಳು ಇರುವಂಥದ್ದು. ಸಿರಿವಂತರು ತೆಗೆದುಕೊಳ್ತಿದ್ರೆ ತಪ್ಪು ಎಂದು ಕಿವಿಮಾತು ಹೇಳಿದ್ರು.
