ಉದಯವಾಹಿನಿ, ಕಾಕಿನಾಡ (ಆಂಧ್ರಪ್ರದೇಶ): ಆಂಧ್ರ ಪ್ರದೇಶ ರಾಜ್ಯದ ಕಾಕಿನಾಡ ಜಿಲ್ಲೆಯ ವೆಟ್ಲಪಲೆಂ ಎಂಬ ಗ್ರಾಮದಲ್ಲಿನ ಸೂರ್ಯಶ್ರೀ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, 21 ಜನ ಸಜೀವ ದಹನವಾಗಿರುವ ಭಯಾನಕ ಘಟನೆ ಇಂದು (ಶನಿವಾರ) ನಡೆದಿದೆ. ಘಟನೆಯಲ್ಲಿ 9 ಜನರು ಗಂಭೀರವಾಗಿ ಗಾಯಗೊಂಡಿದ್ದು, ಇತರ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದುರಂತ ಸಮಯದಲ್ಲಿ ಒಟ್ಟು 34 ಕಾರ್ಮಿಕರು ಕಾರ್ಖಾನೆಯಲ್ಲಿದ್ದರು.ಇಂದು ಮಧ್ಯಾಹ್ನ 2 ಗಂಟೆಗೆ ಘಟನೆ ನಡೆದಿದ್ದು, ಪೊಲೀಸರು ಇಲ್ಲಿಯವರೆಗೆ 11 ಮಂದಿ ಮೃತರನ್ನು ಗುರುತಿಸಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು ಕಾರ್ಖಾನೆಯ ಮಹಿಳಾ ಕಾರ್ಮಿಕರು ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾರ್ಖಾನೆಯು ಅಡಪ ನಾಣಿ ಎಂಬುವರ ಕುಟುಂಬಕ್ಕೆ ಸೇರಿದ್ದು, ಗ್ರಾಮದ ಒಂದು ಹೊಲದ 6 ಶೆಡ್‌ಗಳಲ್ಲಿ ಇದನ್ನು ಸ್ಥಾಪಿಸಲಾಗಿದೆ.
ಸ್ಥಳೀಯರ ಪ್ರಕಾರ, ಸ್ಫೋಟದ ಶಬ್ದವು ಸ್ಥಳದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿ ಕೇಳಿಸಿದ್ದು, ಸ್ಫೋಟದ ಭೀಕರತೆಗೆ ನೆರೆಯ ಹಳ್ಳಿಯ ಖಾಸಗಿ ಶಾಲೆಯ ಛಾವಣಿಯಲ್ಲಿ ಬಿರುಕುಗಳು ಉಂಟಾಗಿವೆ. ಸ್ಫೋಟಕ್ಕೆ ಕಾರ್ಮಿಕರ ಮೃತದೇಹಗಳು ಹತ್ತಿರದ ಹೊಲಗಳಿಗೆ ಎಸೆಯಲ್ಪಟ್ಟಿವೆ. ಅಗ್ನಿಶಾಮಕ ವಾಹನಗಳು ಕರೆಯಿಸಲಾದರೂ, ಕಾರ್ಖಾನೆಯು ಹೊಲಗಳ ಮಧ್ಯದಲ್ಲಿ ಇರುವುದರಿಂದ ತುರ್ತು ವಾಹನಗಳು ಸ್ಥಳಕ್ಕೆ ತಲುಪಲು ಯಾವುದೇ ರಸ್ತೆ ಸಂಪರ್ಕ ಇಲ್ಲದೇ ಇರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡೆಚಣೆ ಉಂಟಾಗಿದೆ.
ತಕ್ಷಣ ಪರಿಹಾರಕ್ಕೆ ಮುಖ್ಯಮಂತ್ರಿ ಘೋಷಣೆ: ಸಿಎಂ ಚಂದ್ರಬಾಬು ಅವರು ಘಟನಾ ಸ್ಥಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ವೆಟ್ಲಪಲೆಂ ಸ್ಫೋಟ ಸ್ಥಳವನ್ನು ಸಿಎಂ ಪರಿಶೀಲಿಸಲಿದ್ದಾರೆ. ಇನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವಿಜಯನಗರ ಪ್ರವಾಸದಲ್ಲಿದ್ದಾಗ ಘಟನೆಯ ಬಗ್ಗೆ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಅವರು ಗೃಹ ಸಚಿವ ವಂಗಲಪುಡಿ ಅನಿತಾ ಅವರನ್ನು ಘಟನೆಯ ಸ್ಥಳಕ್ಕೆ ಹೋಗಲು ಆದೇಶಿಸುವುದರ ಜೊತೆಗೆ ತಕ್ಷಣ ಪರಿಹಾರ ಕ್ರಮಕ್ಕೆ ಆದೇಶಿಸಿದ್ದಾರೆ. “ಈ ಅಪಘಾತದಲ್ಲಿ ಹಲವಾರು ಜೀವಗಳು ಬಲಿಯಾಗಿರುವುದು ಹೃದಯವಿದ್ರಾವಕವಾಗಿದೆ. ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಸಂತ್ರಸ್ತರಿಗೆ ತಕ್ಷಣ ಅಗತ್ಯ ನೆರವು ನೀಡುವಂತೆ ಸೂಚಿಸಿದ್ದೇನೆ. ಪರಿಹಾರ ಕ್ರಮಗಳನ್ನು ನಾವು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ನಾವು ದುಃಖಿತ ಕುಟುಂಬಗಳೊಂದಿಗೆ ನಿಲ್ಲುತ್ತೇವೆ” ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ಸಾಮಾಜಿಕ ಜಾಲತಾಣದ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಮರುಗಿದ ಡಿಸಿಎಂ ಪವನ್ ಕಲ್ಯಾಣ್: ಪಟಾಕಿ ಕಾರ್ಖಾನೆಯ ದುರಂತಕ್ಕೆ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಸಚಿವ ಕಂದುಲ ದುರ್ಗೇಶ್ ಮತ್ತು ಸಚಿವ ಲೋಕೇಶ್ ಅವರು ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಅವರು ತಮ್ಮ ಆಳವಾದ ಸಂತಾಪ ವ್ಯಕ್ತಪಡಿಸಿದ್ದು, ಸರ್ಕಾರ ಮೃತರ, ಗಾಯಾಳುಗಳ ಕುಟುಂಬಗಳ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿ ಮತ್ತು ಎಸ್ಪಿ ಘಟನಾ ಸ್ಥಳದಲ್ಲಿದ್ದು, ಪರಿಸ್ಥಿತಿ ಮತ್ತು ಪರಿಹಾರ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ಗಾಯಾಳುಗಳನ್ನು ಉತ್ತಮ ಚಿಕಿತ್ಸೆಗಾಗಿ ಕಾಕಿನಾಡಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿಎಂ ಪವನ್ ಕಲ್ಯಾಣ್ ತಿಳಿಸಿದ್ದಾರೆ.
