ಉದಯವಾಹಿನಿ, ಬೊಲಿವಿಯಾ: ಹೊಸದಾಗಿ ಮುದ್ರಿತವಾದ ಕರೆನ್ಸಿ ನೋಟುಗಳನ್ನು ಹೊತ್ತೊಯ್ಯುತ್ತಿದ್ದ ಬೊಲಿವಿಯನ್ ವಾಯುಪಡೆಯ ಸೇನಾ ಸರಕು ವಿಮಾನ ಪತನಗೊಂಡು ಕನಿಷ್ಠ 15 ಜನ ಸಾವನ್ನಪ್ಪಿದ್ದಾರೆ.ಬೊಲಿವಿಯಾದ ಲಾ ಪಾಜ್ ಸಮೀಪದಲ್ಲಿರುವ ಎಲ್ ಆಲ್ಟೊ ನಗರದಲ್ಲಿ ವಿಮಾನ ಪತನಗೊಂಡಿದೆ. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಬಳಿಕ ವಿಮಾನವು ನೇರವಾಗಿ ಹೆದ್ದಾರಿಯ ಮೇಲೆ ಅಪ್ಪಳಿಸಿದೆ. ಇದೇ ಸಮಯ ರಸ್ತೆಯಲ್ಲಿದ್ದ ನೂರಾರು ವಾಹನಗಳು ನಜ್ಜುಗುಜ್ಜಾಗಿ ಬೆಂಕಿ ಕೂಡ ಹೊತ್ತಿಕೊಂಡಿವೆ.

ಅಗ್ನಿಶಾಮಕ ದಳದ ಮುಖ್ಯಸ್ಥ ಪಾವೆಲ್ ಟೋವರ್ ಅವರ ಪ್ರಕಾರ, ಈ ಭೀಕರ ದುರಂತದಲ್ಲಿ 15 ಮಂದಿ ಸಾವನ್ನಪ್ಪಿದ್ದು, 30 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದ್ರೆ, ಅಪಘಾತದ ಸಮಯದಲ್ಲಿ ಮೃತರು ವಿಮಾನದಲ್ಲಿದ್ದರೋ ಅಥವಾ ಅಪಘಾತಕ್ಕೀಡಾದ ವಾಹನಗಳಲ್ಲಿದರೋ ಅನ್ನೋದು ಇನ್ನೂ ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ.ಇನ್ನೂ ವರದಿಗಳ ಪ್ರಕಾ, ಪತನಗೊಂಡ ಬೊಲಿವಿಯನ್ ವಾಯುಪಡೆಯ ಹರ್ಕ್ಯುಲಸ್ ವಿಮಾನವು, ಸೆಂಟ್ರಲ್ ಬ್ಯಾಂಕಿನಿಂದ ಇತರ ನಗರಗಳಿಗೆ ಹೊಸ ಕರೆನ್ಸಿ ನೋಟುಗಳನ್ನ ಸಾಗಿಸುತ್ತಿತ್ತು. ಕೋಟ್ಯಂತರ ರೂಪಾಯಿ ಮೌಲ್ಯದ ಹೊಸ ನೋಟುಗಳನ್ನ ಹೊತ್ತೊಯ್ಯುತ್ತಿತ್ತು. ಈ ವಿಮಾನವು ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ನೋಟುಗಳ ಕಂತೆಗಳು ಗಾಳಿಯಲ್ಲಿ ಹಾರಿ, ರಸ್ತೆಯಾದ್ಯಂತ ಚೆಲ್ಲಿಕೊಂಡಿದೆ. ಅದಕ್ಕೂ ಮುನ್ನ ಹೆದ್ದಾರಿಗೆ ಅಪ್ಪಳಿಸಿದ ಬಳಿಕ ಅನೇಕ ಕಾರುಗಳು ವಿಮಾನ ಚಕ್ರಕ್ಕೆ ಸಿಲುಕಿ ಅಪ್ಪಚ್ಚಿಯಾಗಿವೆ. ಈ ಕುರಿತ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

Leave a Reply

Your email address will not be published. Required fields are marked *

error: Content is protected !!