ಉದಯವಾಹಿನಿ, ಕೆನಡಾ : ನಾಲ್ಕು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಅವರ ಈ ಭೇಟಿಯು ಭಾರತ ಮತ್ತು ಕೆನಡಾ ನಡುವಿನ ಸಂಬಂಧವನ್ನು ಪುನರ್ನಿರ್ಮಿಸುವುದು ಮತ್ತು ವ್ಯಾಪಾರ ವಹಿವಾಟುಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಕೆನಡಾದಿಂದ ನೇರವಾಗಿ ಮುಂಬೈಗೆ ಆಗಮಿಸಿರುವ ಅವರು ಮಾರ್ಚ್ 2 ರವರೆಗೆ ಭಾರತ ಪ್ರವಾಸದಲ್ಲಿರಲಿದ್ದಾರೆ.
ಅಮೆರಿಕದೊಂದಿಗೆ ಸಂಬಂಧ ಹದಗೆಟ್ಟ ಬಳಿಕ ಕೆನಡಾವು ಭಾರತ, ಚೀನಾ ಸೇರಿ ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಗಾಢವಾಗಿಸುವ ಗುರಿಯನ್ನು ಹೊಂದಿದೆ. ಮುಂಬೈಗೆ ಬಂದಿರುವ ಅವರು ನವದೆಹಲಿಗೆ ತೆರಳುವ ಮುನ್ನ ಮುಂಬೈಯಲ್ಲಿ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ.
ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಕೆನಡಾದ ಪ್ರಜೆಯ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿದ ಬಳಿಕ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿತ್ತು. ಆದರೆ ಇದನ್ನು ನವದೆಹಲಿ ತಿರಸ್ಕರಿಸಿತ್ತು. ಇದೀಗ ಕಾರ್ನಿ ಅವರ ಈ ಭೇಟಿಯ ಮೂಲಕ ಮತ್ತೊಮ್ಮೆ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆಯಾಗುವ ಲಕ್ಷಣ ಕಾಣುತ್ತಿದೆ. ಸಿಖ್ ಪ್ರತ್ಯೇಕತಾವಾದಿ ರಾಜಕೀಯದೊಂದಿಗೆ ನಿಕಟ ಸಂಬಂಧ ಹೊಂದಿರುವ ಪಂಜಾಬ್ ಗೆ ಅವರು ಈ ಸಂದರ್ಭದಲ್ಲಿ ಭೇಟಿ ನೀಡುವುದಿಲ್ಲ. ಇದು ಘರ್ಷಣೆಯನ್ನು ತಪ್ಪಿಸುವ ಕ್ರಮವೆನ್ನಲಾಗುತ್ತಿದೆ.
