ಉದಯವಾಹಿನಿ, ಪ್ರತಿಯೊಬ್ಬರೂ ತಾವು ಸುಂದರವಾಗಿ ಕಾಣಿಸಬೇಕು, ತಮ್ಮ ಮುಖ ಗ್ಲೋ ಆಗಿರಬೇಕು ಎಂಬ ಬಯಕೆ ಹೊಂದಿರುತ್ತಾರೆ. ಹೀಗಾಗಿ ಹಲವರು ಬ್ಯೂಟಿ ಪಾರ್ಲರ್ ಮತ್ತು ದುಬಾರಿ ಮೇಕಪ್ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಈ ರಾಸಾಯನಿಕ ಉತ್ಪನ್ನಗಳನ್ನು ಪ್ರತಿನಿತ್ಯ ಮುಖಕ್ಕೆ ಹಚ್ಚುವುದರಿಂದ ಅನೇಕ ಅಡ್ಡಪರಿಣಾಮಗಳನ್ನು ಎದುರಿಸಬೇಕಾಗಬಹುದು. ಆದರೆ ಕೆಲ ಮನೆಮದ್ದುಗಳನ್ನು ಉಪಯೋಗಿಸುವ ಮೂಲಕ ನೀವು ನ್ಯಾಚುರಲ್ ಆಗಿಯೇ ತ್ವಚೆಯನ್ನು ಕಾಂತಿಯುತವಾಗಿಸಿಕೊಳ್ಳಬಹುದು.
ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ವಿವಿಧ ರೀತಿಯಲ್ಲಿ ತಮ್ಮ ತ್ವಚೆಗೆ ಆರೈಕೆ ಮಾಡಿಕೊಳ್ಳುವ ವಿಡಿಯೋಗಳನ್ನು ಪೋಸ್ಟ್ ಮಾಡಿರುವುದನ್ನು ನೀವು ನೋಡಿರಬಹುದಾಗಿದೆ. ಅದರಲ್ಲಿ ಮುಖ್ಯವಾಗಿ ನೀವು ಐಸ್ ಮಸಾಜ್ ಮಾಡಿರುವ ವೀಡಿಯೊಗಳನ್ನು ನೋಡಿರಬಹುದು. ಅನೇಕ ಮಂದಿ ಮೇಕಪ್ಗೂ ಮುನ್ನ ಈ ಐಸ್ ಮಸಾಜ್ ಮಾಡಿಕೊಳ್ಳುತ್ತಾರೆ. ಸದ್ಯ ಟ್ರೆಂಡಿಂಗ್ನಲ್ಲಿ ಐಸ್ ಮಸಾಜ್ ವೀಡಿಯೋವಿದ್ದರೂ, ಇದು ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿರುವ ಹಳೆಯ ವಿಧಾನವಾಗಿದೆ.
ಮುಖದ ಮೇಲೆ ಐಸ್ ಉಜ್ಜುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ, ಇದು ನಿಮ್ಮ ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಒದಗಿಸುತ್ತದೆ. ಇದು ನಿಮ್ಮ ಚರ್ಮದ ಮೇಲೆ ನೇರ ಪರಿಣಾಮ ಬೀರುತ್ತದೆ ಮತ್ತು ಮುಖದ ಮೇಲಿನ ತೆರೆದ ರಂಧ್ರಗಳಿಗೆ (ಓಪನ್ ಪೋರ್ಸ್) ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಹಾಗಾದ್ರೆ ಐಸ್ ಮಸಾಜ್ ಹೇಗೆ ಪ್ರಯೋಜನಕಾರಿ ಎಂಬುದರ ಬಗ್ಗೆ ತಿಳಿಯೋಣ ಬನ್ನಿ.
ಊತ: ಬೆಳಗ್ಗೆ ಎದ್ದಾಗ ನಿಮ್ಮ ಮುಖ ಅಥವಾ ಕಣ್ಣುಗಳು ಊದಿಕೊಂಡಂತೆ ಅನಿಸಿದರೆ, ಐಸ್ ಕ್ಯೂಬ್ ಅನ್ನು ಉಜ್ಜುವುದರಿಂದ ತಕ್ಷಣದ ಪರಿಹಾರ ಸಿಗುತ್ತದೆ.
ಮೊಡವೆಗಳು: ಮೊಡವೆಗಳ ಕೆಂಪು ಮತ್ತು ಊತವನ್ನು ಕಡಿಮೆ ಮಾಡಲು ಐಸ್ ಸಹಾಯ ಮಾಡುತ್ತದೆ, ಇದು ಮೊಡವೆಗಳು ಬೇಗನೆ ಒಣಗಲು ಸಹಾಯ ಮಾಡುತ್ತದೆ.
ಓಪನ್ ಪೋರ್ಸ್: ಮುಖದ ಮೇಲಿನ ತೆರೆದ ರಂಧ್ರಗಳನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ, ನಿಮ್ಮ ಚರ್ಮವನ್ನು ಮೃದುವಾಗಿ ಕಾಣುವಂತೆ ಮಾಡುತ್ತದೆ.
ಸುಕ್ಕುಗಳು: ನಿಯಮಿತ ಬಳಕೆಯಿಂದ, ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳ ರಚನೆಯನ್ನು ತಡೆಯಲಾಗುತ್ತದೆ.
ಮೇಕಪ್: ಮೇಕಪ್ ಹಚ್ಚುವ ಮೊದಲು ಐಸ್ ಉಜ್ಜುವುದರಿಂದ ಮೇಕಪ್ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಮತ್ತು ಚರ್ಮಕ್ಕೆ ನೈಸರ್ಗಿಕ ಹೊಳಪು ಸಿಗುತ್ತದೆ.
