ಉದಯವಾಹಿನಿ, ಮುಂಬೈ: ಮಹಾರಾಷ್ಟ್ರದ ಮುಂಬೈ ನಗರದಲ್ಲಿ ವಿದೇಶಿ ಮಹಿಳಾ ಪ್ರವಾಸಿಗೆಯೊಬ್ಬರಿಗೆ ಸೆಲ್ಫಿ ತೆಗೆಯುವ ನೆಪದಲ್ಲಿ ಯುವಕರಿಬ್ಬರು ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಮಹಾಲಕ್ಷ್ಮೀ ಪ್ರದೇಶದ ಸಮೀಪದಲ್ಲಿ ಈ ಘಟನೆ ನಡೆದಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿವೈರಲ್ ಆಗಿದೆ. ಮಹಿಳೆ ನಿರಾಕರಿಸಿದರೂ ಇಬ್ಬರು ಯುವಕರು ಆಕೆಯನ್ನು ಹಿಂಬಾಲಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು, ಸೆಲ್ಫಿಗಾಗಿ ಒತ್ತಾಯಿಸುತ್ತಿರುವುದು ಕಂಡು ಬಂದಿದೆ. ತಾನು ಮುಂಬೈಯಲ್ಲಿ ಕಿರುಕುಳಕ್ಕೆ ಒಳಗಾದೆ ಎಂದು ಸ್ವತಃ ಆ ವಿದೇಶಿ ಮಹಿಳೆಯೇ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿಕೊಂಡಿದ್ದಾರೆ. ಇನೆಸ್ ಫರಿಯಾ ಎಂಬ ವಿದೇಶಿ ಮಹಿಳೆ ಕಿರುಕುಳಕ್ಕೆ ಒಳಗಾದ ಸಂತ್ರಸ್ತೆ.
ʼʼನಾನು ಭಾರತಕ್ಕೆ ಬಂದು ಎರಡು ತಿಂಗಳು ಕಳೆದಿದೆ, ಇಲ್ಲಿಯವರೆಗೂ ತುಂಬಾ ಆರಾಮದಾಯಕವಾಗಿ, ಖುಷಿಯಾಗಿ ಹಾಗೂ ಸುರಕ್ಷಿತವಾಗಿ ದಿನಗಳನ್ನು ಕಳೆದಿದ್ದೇನೆ. ಆದರೆ ಇಂದು ಮಾತ್ರ ನನಗೆ ಕೊಂಚ ವಿಭಿನ್ನ ಅನುಭವವನ್ನು ನೀಡಿದ್ದು, ಅಭದ್ರತೆ ಕಾಡಿದೆ. ನಾನು ಹಲವು ಬಾರಿ ಬೇಡ ಎಂದು ಹೇಳಿದರೂ, ನಿರಾಕಾರಿಸಿದರೂ, ಇಬ್ಬರು ಯುವಕರು ಸೆಲ್ಫಿಗಾಗಿ ಪೀಡಿಸಿದ್ದು, ನನ್ನ ಹಿಂದೆ ಬಿದಿದ್ದರು. ಅವರ ವರ್ತನೆಯಿಂದ ನನಗೆ ಇರುಸುಮುರುಸಾಗಿದ್ದು, ಅಹಿತಕರ ಅನುಭವವನ್ನು ಎದುರಾಯಿತು. ಆ ಯುವಕರು ಸುಮಾರು 15 ನಿಮಿಷಗಳಿಗೂ ಹೆಚ್ಚು ಕಾಲ ನಮ್ಮನ್ನು ಹಿಂಬಾಲಿಸಿದ್ದು, ಅದು ನಿಜವಾಗಿಯೂ ಅತಿರೇಕವೆನಿಸಲು ಪ್ರಾರಂಭಿಸಿತು. ಅವರ ನಡತೆಯಿಂದ ತಾಳ್ಮೆ ಕಳೆದುಕೊಂಡು, ನನ್ನ ಸುರಕ್ಷತೆಗಾಗಿ ನಾನು ಅವರನ್ನು ದೈಹಿಕವಾಗಿ ದೂರ ತಳ್ಳಬೇಕಾಯಿತು” ಎಂದು ಅವರು ಬರೆದಿದ್ದಾರೆ.
