ಉದಯವಾಹಿನಿ, ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಇಸ್ರೇಲ್ ಮತ್ತು ಅಮೆರಿಕ ದಾಳಿಯಲ್ಲಿ ಹತ್ಯೆಯಾದ ಪಶ್ಚಿಮ ಏಷ್ಯಾದ ಧಾರ್ಮಿಕ ಗುರು ಮತ್ತು ಪ್ರಭಾವಿ ರಾಜಕಾರಣಿ ಅಯತೊಲ್ಲಾ ಅಲಿ ಖಮೇನಿ ಬಹು ವರ್ಷಗಳ ಹಿಂದೆ ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಈ ಪ್ರದೇಶದಲ್ಲಿನ ಮುಸ್ಮಿಮರ ಸ್ಥಿತಿ ಕುರಿತು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದರು. ಇದಾಗಿ ದಶಕಗಳ ಬಳಿಕ ಕಾಶ್ಮೀರ ವಿಚಾರದಲ್ಲಿ ಧ್ವನಿ ಎತ್ತಿದ್ದು, 2019ರಲ್ಲಿ ನೇ 370 ವಿಧಿ ರದ್ದತಿ ಕುರಿತು ಟೀಕಿಸಿದ್ದರು. 1980ರಲ್ಲಿ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಖಮೇನಿ, ಶ್ರೀನಗರ ಐತಿಹಾಸಿಕ ಜಾಮೀಯಾ ಮಸೀದಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದರು. ಖಮೇನಿ ಭೇಟಿಯು ಕಾಶ್ಮೀರದ ಆಧುನಿಕ ರಾಜಕೀಯ ಮತ್ತು ಧಾರ್ಮಿಕ ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಅಂದು 41ವರ್ಷದ ವಯಸ್ಸಿನ ಖಮೇನಿ ಇರಾನ್‌ನ ಕ್ರಾಂತಿಯ ನಂತರದ ನಾಯಕತ್ವದ ಪ್ರಮುಖ ಧ್ವನಿಯಾಗಿ ಹೊರಹೊಮ್ಮಿದ್ದರು. ಈ ಕ್ರಾಂತಿಯು 1979ರಲ್ಲಿ ಇರಾನ್‌ನ ಶಾ (ಮೊಹಮ್ಮದ್ ರೆಜಾ ಪಹ್ಲವಿ) ಪತನದ ನಂತರ ಇರಾನ್ ವ್ಯಾಪಕ ರಾಜಕೀಯ ಬದಲಾವಣೆಗಳಿಗೆ ಒಳಗಾಗಿತ್ತು.
ಮುಸ್ಲಿಮರ ಸಮಸ್ಯೆ ಕುರಿತು ಮಾತು: ಜಾಮೀಯಾ ಮಸೀದಿಯಲ್ಲಿ ಅಂದು ಖಮೇನಿ, ಜಾಗತಿಕವಾಗಿ ಮುಸ್ಲಿಮರ ಸ್ಥಿತಿ ಕುರಿತು ವಿಸ್ತಾರವಾಗಿ ಮಾತನಾಡಿದ್ದು, ರಾಜಕೀಯ ಅಥವಾ ಸಾಮಾಜಿಕವಾಗಿ ಸಮಸ್ಯೆ ಎದುರಿಸುತ್ತಿರುವ ಅವರ ಕುರಿತು ಒಗ್ಗಟ್ಟು ಪ್ರದರ್ಶಿಸಿದ್ದರು. ಅವರ ಈ ಭಾಷಣ ಧಾರ್ಮಿಕ ಗುರುಗಳು ಮತ್ತು ಕಾಶ್ಮೀರದ ರಾಜಕೀಯ ವಿಶ್ಲೇಷಕರ ಗಮನ ಸೆಳೆದಿತ್ತು.
ಈ ಭೇಟಿ ವೇಳೆ ಖಮೇನಿ, ಶ್ರೀನಗರದ ಜದಿಬಲ್ ಇಮಾಂಬರಾದಲ್ಲಿ ಶಿಯಾ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಜೊತೆಗೆ ಹಜರತ್‌ಬಲ್ ದೇಗುಲಕ್ಕೆ ಭೇಟಿ ನೀಡಿ, ಬುಡ್ಗಾಮ್‌ಗೆ ಪ್ರಯಾಣ ಬೆಳೆಸಿದ್ದರು. ಆಘಾ ಕುಟುಂಬದ ಸದಸ್ಯರು ಅವರ ಆತಿಥ್ಯ ವಹಿಸಿಕೊಂಡಿದ್ದರು.
ಅವರ ಈ ಭೇಟಿಯು ಕ್ರಾಂತಿಯ ಬಳಿಕ ದೇಶದೆಲ್ಲೆಡೆ ಇರುವ ಇತರ ಮುಸ್ಲಿಂ ಸಮುದಾಯದ ಜೊತೆಗೆ ಮತ್ತು ನಾಯಕರೊಂದಿಗೆ ಸಂಪರ್ಕ ಸಾಧಿಸುವ ಇರಾನ್‌ನ ನೀತಿಯ ಭಾಗವಾಗಿತ್ತು. 370ನೇ ವಿಧಿ ರದ್ದು ಮಾಡಿದ್ದಕ್ಕೆ ಟೀಕೆ ರದ್ದಿಗೆ; ಇದಾದ ವರ್ಷಗಳ ಬಳಿಕ ಖಮೇನಿ 2019ರಲ್ಲಿ ವಿಧಿ 370 ಅನ್ನು ಭಾರತ ಸರ್ಕಾರ ರದ್ದು ಮಾಡಿದ್ದರ ಕುರಿತು, ಕಾಶ್ಮೀರ ಪರಿಸ್ಥಿತಿಗಳ ಬಗ್ಗೆ ಅವರು ಸಾರ್ವಜನಿಕವಾಗಿ ಮಾತನಾಡಿದ್ದರು. ಈ ಕುರಿತು 2019ರಲ್ಲಿ ಆಗಸ್ಟ್ 21ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಅವರು, ಈ ಪ್ರದೇಶದಲ್ಲಿನ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಕಾಶ್ಮೀರದಲ್ಲಿನ ಮುಸ್ಲಿಮರ ಪರಿಸ್ಥಿತಿ ಬಗ್ಗೆ ನಾವು ಕಾಳಜಿಯನ್ನು ಹೊಂದಿದ್ದೇವೆ. ಭಾರತದೊಂದಿಗೆ ನಮ್ಮ ಸಂಬಂಧ ಉತ್ತಮವಾಗಿದೆ. ಆದಾಗ್ಯೂ, ಭಾರತ, ಈ ಪ್ರದೇಶದಲ್ಲಿ ಕೇವಲ ನೀತಿ ಹೊಂದುವುದಲ್ಲ, ಮುಸ್ಲಿಮರ ಮೇಲಿನ ದಬ್ಬಾಳಿಕೆ ತಡೆಯಬೇಕಿದೆ ಎಂದು ಆಗ್ರಹಿಸಿದ್ದರು. ಕಾಶ್ಮೀರದಲ್ಲಿನ ಪ್ರಸ್ತುತ ಪರಿಸ್ಥಿತಿ ಮತ್ತು ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದಗಳು ಬ್ರಿಟಿಷ್ ಸರ್ಕಾರ ತೆಗೆದುಕೊಂಡ ಕ್ರೂರ ಕ್ರಮಗಳ ಪರಿಣಾಮವಾಗಿದೆ. ಕಾಶ್ಮೀರದಲ್ಲಿ ಘರ್ಷಣೆಗಳನ್ನು ಇರುವಂತೆ ಮಾಡಲು ಬ್ರಿಟಿಷರು ಉದ್ದೇಶಪೂರ್ವಕವಾಗಿ ಈ ಪ್ರದೇಶವನ್ನು ಗಾಯಗೊಳಿಸಿದೆ ಎಂದಿದ್ದರು. ಇರಾನ್‌ನ ಸರ್ವೋಚ್ಛ ನಾಯಕರ ಈ ಮಾತು ರಾಜತಾಂತ್ರಿಕರು ಮತ್ತು ರಾಜಕೀಯ ವೃತ್ತದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ಕಾರಣ ಇರಾನ್ ಭಾರತದೊಂದಿಗೆ ಸದಾ ಸಮತೋಲಿತ ಸಂಬಂಧ ಕಾಯ್ದುಕೊಂಡಿದೆ. ಹೀಗಾಗಿ ಖಮೇನಿ ಅವರ ಈ ಹೇಳಿಕೆ ಭಾರಿ ಸದ್ದು ಮಾಡಿತ್ತು.
