ಉದಯವಾಹಿನಿ, ನವದೆಹಲಿ: ನವೀಕರಿಸಬಹುದಾದ ಇಂಧನ ಬಳಕೆ ಉತ್ತೇಜನ ಮತ್ತು ನಿರ್ಣಾಯಕ ಖನಿಜ ವಲಯದಲ್ಲಿ ಸಹಕಾರ ಹೆಚ್ಚಿಸುವ ಗುರಿಯೊಂದಿಗೆ ಸೋಮವಾರ ಭಾರತ ಮತ್ತು ಕೆನಡಾ ತಿಳಿವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿವೆ. ದ್ವಿಪಕ್ಷೀಯ ಪಾಲುದಾರಿಕೆ ಬಲಪಡಿಸುವ ಸಂಬಂಧ ಇಲ್ಲಿನ ಹೈದರಾಬಾದ್ ಹೌಸ್‌ನಲ್ಲಿ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಮಾತುಕತೆ ನಡೆಸಿದರು.ಬಳಿಕ, ಕೆನಡಾದ ಪ್ರಧಾನಿ ಕಾರ್ನಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಭಾರತ ಮತ್ತು ಕೆನಡಾ ಶೀಘ್ರದಲ್ಲೇ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು ಅಂತಿಮಗೊಳಿಸಲು ನಿರ್ಧರಿಸಿವೆ” ಎಂದು ಘೋಷಿಸಿದರು.ಜಗತ್ತಿನಲ್ಲಿ ಬಹಳ ಕಡಿಮೆ ಜನರು ಎರಡು ದೇಶಗಳ ಕೇಂದ್ರ ಬ್ಯಾಂಕ್‌ಗಳನ್ನು ಮುನ್ನಡೆಸಿದ್ದಾರೆ. ನಮ್ಮ ಮೊದಲ ಸಭೆಯಿಂದಲೇ ನಮ್ಮ ಸಂಬಂಧಗಳಲ್ಲಿ ಹೊಸ ಶಕ್ತಿ, ಪರಸ್ಪರ ನಂಬಿಕೆ ಮತ್ತು ಸಕಾರಾತ್ಮಕತೆ ಹೊರಹೊಮ್ಮಿದೆ. ಕಾರ್ನಿ ಅವರ ಭಾರತ ಭೇಟಿ ಒಂದು ಪ್ರಮುಖ ಮೈಲಿಗಲ್ಲು ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

ಅಲ್ಲದೆ, ಕಳೆದ ವರ್ಷ ಕೆನಡಾದಲ್ಲಿ ನಡೆದ G7 ಸಭೆಯ ಸಂದರ್ಭದಲ್ಲಿ ತಮ್ಮೊಂದಿಗಿನ ಆತ್ಮೀಯ ಭೇಟಿಯನ್ನು ನೆನಪಿಸಿಕೊಂಡ ಮೋದಿ, ಎರಡು ದೇಶಗಳ ಕೇಂದ್ರ ಬ್ಯಾಂಕಿಂಗ್ ನಾಯಕತ್ವದಲ್ಲಿ ಕಾರ್ನಿ ಅವರ ಪಾತ್ರಕ್ಕಾಗಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಸಹಕಾರದ ಎಲ್ಲಾ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವ ಆವೇಗಕ್ಕೆ ನನ್ನ ಸ್ನೇಹಿತ ಪ್ರಧಾನಿ ಕಾರ್ನಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಭಾರತ ಮತ್ತು ಕೆನಡಾ ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ಅಚಲ ನಂಬಿಕೆ ಹೊಂದಿವೆ. ನಾವು ವೈವಿಧ್ಯತೆಯನ್ನು ಆಚರಿಸುತ್ತೇವೆ. ಮಾನವೀಯತೆಯ ಕಲ್ಯಾಣವು ನಮ್ಮ ಹಂಚಿಕೆಯ ದೃಷ್ಟಿಕೋನವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.ಇಂದು ಉಭಯ ನಾಯಕರು ವ್ಯಾಪಾರ ಸಮುದಾಯದ ಸದಸ್ಯರನ್ನು ಭೇಟಿ ಮಾಡಲಿದ್ದೇವೆ. ಸದಸ್ಯರ ಸಲಹೆಗಳು ಎರಡೂ ದೇಶಗಳ ನಡುವಿನ ಆರ್ಥಿಕ ಸಹಕಾರಕ್ಕಾಗಿ ಮಾರ್ಗಸೂಚಿ ರೂಪಿಸಲು ಸಹಾಯವಾಗಲಿವೆ ಎಂದು ಪ್ರಧಾನಿ ತಿಳಿಸಿದರು.

 

Leave a Reply

Your email address will not be published. Required fields are marked *

error: Content is protected !!