ಉದಯವಾಹಿನಿ, ಭೋಪಾಲ್, ಮಧ್ಯಪ್ರದೇಶ: ದೇವಾಸ್ ಜಿಲ್ಲೆಯ ದತ್ತೋತರ್ ಗ್ರಾಮದ ಚಿಂತಾಮಣಿ ಪಾಟಿದಾರ್, ಒಬ್ಬ ದಿನಗೂಲಿ ಕಾರ್ಮಿಕರಾಗಿದ್ದವರು. ಮನೆಯಲ್ಲಿನ ಕಷ್ಟಗಳಿಂದಾಗಿ ಅವರ ಶಿಕ್ಷಣ 8ನೇ ತರಗತಿಗೆ ನಿಂತು ಹೋಗಿತ್ತು. ಆದರೆ, ಇಂದು 10 ಸಾವಿರದಿಂದ ಆರಂಭಿಸಿ, 5.05 ಕೋಟಿ ರೂ. ಮೊತ್ತದ ವಹಿವಾಟು ನಡೆಸುತ್ತಿರುವ ಕಂಪನಿಯ ಮುಖ್ಯಸ್ಥರಾಗಿದ್ದಾರೆ.ಚಿಂತಾಮಣಿ ಎಂಬ ಸ್ವ-ಸಹಾಯ ಗುಂಪಿನ ಸದಸ್ಯೆ, ಜುಲೈ 2017 ರಲ್ಲಿ ಕೇವಲ 10,000 ರೂ. ಹೂಡಿಕೆಯೊಂದಿಗೆ ತಮ್ಮ ಕೆಲಸವನ್ನು ಪ್ರಾರಂಭ ಮಾಡಿದರು. ಭಾರತ ಸರ್ಕಾರದ ರೈತ ಉತ್ಪಾದಕ ಕಂಪನಿ ಯೋಜನೆಯಡಿ ಆಲೂಗಡ್ಡೆ ಚಿಪ್ಸ್ ಉತ್ಪಾದಿಸುವ ವಾಣಿಜ್ಯ ಉದ್ಯಮವನ್ನು ಇವರು ಆರಂಭಿಸಿದ್ದರು. ನಾಲ್ಕು ವರ್ಷಗಳ ನಂತರ, ಅವರ ಕಂಪನಿ ವಿಜಯಗಂಜ್ ಮಂಡಿ ರೈತ ಉತ್ಪಾದಕ ಕಂಪನಿ ಲಿಮಿಟೆಡ್ನ ದೀದಿ ಚಿಪ್ಸ್ ಒಂದು ಅದ್ಬುತ ಬ್ರಾಂಡ್ ಆಗಿ ಬದಲಾಗುವುದರೊಂದಿಗೆ ಪ್ರವರ್ಧಮಾನಕ್ಕೆ ಬಂತು. ಬಳಿಕ ಈ ಕಂಪನಿ ಈಗ ಎಲ್ಲಡೆ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.
ಈ ಯಶಸ್ಸಿನ ಬಗ್ಗೆ ಮಾತನಾಡಿರುವ ಪಾಟಿದಾರ್, ಜುಲೈ 2017ರಲ್ಲಿ ಕೃಷ್ಣ ಸ್ವಸಹಾಯ ಗುಂಪು ಸೇರಿದೆ. ಆ ನಂತರ ನನ್ನ ಜೀವನವು ಹೊಸ ತಿರುವು ಪಡೆದುಕೊಂಡಿತು. ನಾನು ಕಾರ್ಮಿಕಳಾಗಿ ಕೆಲಸ ಮಾಡುವುದನ್ನು ಬಿಟ್ಟು ವ್ಯವಹಾರದ ಜಗತ್ತಿಗೆ ಪ್ರವೇಶಿಸಿದೆ. ಈ ಸಂದರ್ಭದಲ್ಲಿ ನನಗೆ ವ್ಯವಹಾರದ ಬಗ್ಗೆ ನನಗೆ ಯಾವುದೇ ಜ್ಞಾನವಿರಲಿಲ್ಲ. ಆ ಬಗ್ಗೆ ಹಂತ ಹಂತವಾಗಿ ತಿಳಿದುಕೊಳ್ಳುತ್ತಾ ಸಾಗಿದೆ. ಪ್ರಸ್ತುತ, ದೀದಿ ಚಿಪ್ಸ್ ಅತ್ಯಂತ ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಮಧ್ಯಪ್ರದೇಶ ಅಷ್ಟೇ ಅಲ್ಲದೇ ಕರ್ನಾಟಕ, ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ವಿಸ್ತರಿಸಿರುವ ಕಂಪನಿ ಅತ್ಯುತ್ತಮ ವ್ಯವಹಾರ ನಡೆಸುತ್ತಿದೆ. ಈಗ ಕಂಪನಿಗೆ ಚಿಂತಾಮಣಿ ಅವರೇ ಅಧ್ಯಕ್ಷೆ ಹಾಗೂ ಎಂಡಿ. ದೇವಾಸ್ ಜಿಲ್ಲೆಯ ದತ್ತೋತರ್ ಪ್ರದೇಶದಲ್ಲಿ ರೈತರು ಹೆಚ್ಚಾಗಿ ಆಲೂಗಡ್ಡೆ ಕೃಷಿ ಮಾಡ್ತಾರೆ. ಈ ಹಿಂದೆ ರೈತರು ಪ್ರತಿ ಕೆಜಿಗೆ 10 ರೂ.ಗೆ ಆಲೂಗಡ್ಡೆ ಮಾರಾಟ ಮಾಡುತ್ತಿದ್ದರು. ಕೃಷಿ ಇಲಾಖೆ ಅಧಿಕಾರಿಗಳ ಸಲಹೆಯನ್ನು ಅನುಸರಿಸಿ, ಈ ಆಲೂಗಡ್ಡೆಯಿಂದ ಚಿಪ್ಸ್ ತಯಾರಿಸುವುದರಿಂದ ಆದಾಯವನ್ನು ಗಮನಾರ್ಹವಾಗಿ ಹೆಚ್ಚಿಸಬಹುದು ಎಂದು ಚಿಂತಾಮಣಿ ಅವರು ಅರಿತುಕೊಂಡರು. ಆ ಬಳಿಕ ಆಕ್ಸೆಸ್ ಡೆವಲಪ್‌ಮೆಂಟ್ ಸರ್ವೀಸಸ್‌ನ ಬೆಂಬಲದೊಂದಿಗೆ ಆಲೂಗಡ್ಡೆ ಚಿಪ್ಸ್ ಘಟಕ ಸ್ಥಾಪಿಸಲಾಯಿತು ಎಂದು ತಮ್ಮ ಕಂಪನಿ ಬಗ್ಗೆ ಅವರು ಹೇಳಿಕೊಂಡರು.
ದೀದಿ ಚಿಪ್ಸ್ ಎಂದು ಹೆಸರಿಟ್ಟಿದ್ದೇಕೆ?: ದೀದಿ ಚಿಪ್ಸ್ ಎಂಬ ಹೆಸರನ್ನು ನಮ್ಮ ಬ್ರ್ಯಾಂಡ್‌ನಿಂದಲೇ ಆಯ್ಕೆ ಮಾಡಲಾಗಿದೆ. ಏಕೆಂದರೆ ಇಲ್ಲಿ ಎಲ್ಲ ಕಾರ್ಮಿಕರು ಮಹಿಳೆಯರಾಗಿದ್ದಾರೆ. ಇಂದು ಈ ಕಾರ್ಖಾನೆ ನೇರವಾಗಿ 20 ರಿಂದ 25 ಮಹಿಳೆಯರನ್ನು ನೇಮಿಸಿಕೊಂಡು ಕೆಲಸ ಕೊಟ್ಟಿದೆ. ಸುಮಾರು 100 ಮಹಿಳೆಯರಿಗೆ ಸುಧಾರಿತ ಆಲೂಗಡ್ಡೆ ಬೀಜಗಳನ್ನು ನೀಡಲಾಗಿದೆ. 125 ರೈತರಿಗೆ ಉಚಿತ ಮಣ್ಣಿನ ಪರೀಕ್ಷೆಯನ್ನು ಮಾಡಿಸಿಕೊಟ್ಟಿದ್ದೇವೆ ಅಂತಾರೆ ಚಿಂತಾಮಣಿ ಪಾಟಿದಾರ್.
ಇಂದು ಕಂಪನಿಯು 608 ಕ್ಕೂ ಹೆಚ್ಚು ಷೇರುದಾರರನ್ನು ಹೊಂದಿದೆ. ಚಿಂತಾಮಣಿ ಕೇಂದ್ರದಿಂದ 11.72 ಲಕ್ಷ ರೂಪಾಯಿಗಳ ಷೇರು ಬೆಂಬಲವನ್ನು ಸಹ ಪಡೆದುಕೊಂಡಿದೆ. ಈ ಉದ್ಯಮವು ಚಿಂತಾಮಣಿ ಅವರ ಏಳಿಗೆಗೆ ಸಹಾಯ ಮಾಡುವುದಲ್ಲದೇ, ಲಾಭದಾಯಕ ಕೃಷಿಯ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಸಬಲೀಕರಣಗೊಳಿಸಿದೆ. ನೂರಾರು ಮಹಿಳೆಯರು ಸ್ವಾವಲಂಬಿಗಳಾಗಲು ಈ ಉದ್ಯಮ ಸಹಾಯ ಮಾಡಿದೆ.
