ಉದಯವಾಹಿನಿ, ಹೈದರಾಬಾದ್: ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ‘ಫಿಟ್ ಇಂಡಿಯಾ ಭಾರತ್’ ಅಭಿಯಾನದಡಿ ಇಲ್ಲಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇದೇ 14ರಂದು ‘ಗ್ಲೋ ರನ್’ ಕಾರ್ಯಕ್ರಮ ನಡೆಯಲಿದೆ. ಹಲವಾರು ಓಟಗಾರರು ಇದರಲ್ಲಿ ಭಾಗವಹಿಸಲಿದ್ದಾರೆ.ಕಾರ್ಯಕ್ರಮದ ಹಿನ್ನೆಲೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಪ್ರಸಿದ್ಧ ಕೂಚಿಪುಡಿ ನೃತ್ಯಗಾರ್ತಿ ದೀಪಿಕಾ ರೆಡ್ಡಿ ಮತ್ತು ಅಂತಾರಾಷ್ಟ್ರೀಯ ಬಿಲ್ಲುಗಾರ್ತಿ ಜ್ಯೋತಿ ಸುರೇಖಾ ವೆನ್ನಮ್ ಅವರು ರಾಮೋಜಿ ಫಿಲ್ಮ್ ಸಿಟಿಯ ಸಿತಾರಾ ಹೋಟೆಲ್‌ನಲ್ಲಿ ಜೆರ್ಸಿ ಮತ್ತು ವಿಜೇತರಿಗೆ ನೀಡಲಾಗುವ ಪದಕಗಳನ್ನು ಅನಾವರಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೀಪಿಕಾ ರೆಡ್ಡಿ ಅವರು, “ಗ್ಲೋ ರನ್ ಫಿಟ್‌ನೆಸ್, ಸಂತೋಷ ಮತ್ತು ಒಗ್ಗಟ್ಟನ್ನು ಆಚರಿಸುವ ಸ್ಪೂರ್ತಿದಾಯಕ ಮತ್ತು ಅಂತರ್ಗತ ಕಾರ್ಯಕ್ರಮ ಎಂದು ಬಣ್ಣಿಸಿದರು. ಇಲ್ಲಿ ಗೆಲುವು, ಸೋಲು ಮುಖ್ಯವಲ್ಲ. ಭಾಗವಹಿಸುವ ಪ್ರತಿಯೊಬ್ಬರೂ ವಿಜೇತರು. ಈ ಓಟವು ಸಂತೋಷ, ಶಕ್ತಿ ಮತ್ತು ಚಲನೆಯನ್ನು ಆಚರಿಸುವುದಾಗಿದೆ. ಇಂತಹ ಕಾರ್ಯಕ್ರಮಗಳು ಎಲ್ಲ ವಯಸ್ಸಿನ ಜನರು ಸಕ್ರಿಯವಾಗಿರಲು ಪ್ರೇರೇಪಿಸುತ್ತದೆ ಎಂದು ಹೇಳಿದರು.
ಓಟದಿಂದ ದೈಹಿಕ ಆರೋಗ್ಯ: ಬಿಲ್ಲುಗಾರ್ತಿ ಜ್ಯೋತಿ ಸುರೇಖಾ ವೆನ್ನಮ್ ಅವರು ಮಾತನಾಡಿ, “ದೈನಂದಿನ ಜೀವನದಲ್ಲಿ ಫಿಟ್‌ನೆಸ್‌ನ ಬಹುಮುಖ್ಯ. ಓಟವು ನಮ್ಮ ಜೀವನಶೈಲಿಯ ಭಾಗವಾಗಬೇಕು. ಇದು ನಮಗೆ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾನಸಿಕ ಶಾಂತಿಯನ್ನೂ ನೀಡುತ್ತದೆ” ಎಂದರು.
ಗ್ಲೋ ರನ್ ಕಾರ್ಯಕ್ರಮದ ನಿರ್ದೇಶಕ ಅಭಿಷೇಕ್ ಮಿಶ್ರಾ ಅವರು ಕಾರ್ಯಕ್ರಮದ ವಿವರಗಳನ್ನು ನೀಡಿದರು. ಇದೇ ಮೊದಲ ಬಾರಿಗೆ ಓಟಗಾರರು, ಕುಟುಂಬಗಳು ಮತ್ತು ಅನುಭವಿ ಕ್ರೀಡಾಪಟುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಇದರಲ್ಲಿ 3 ಸಾವಿರ ಕಿ.ಮೀ., 5 ಸಾವಿರ ಕಿ.ಮೀ. ಮತ್ತು 10 ಸಾವಿರ ಕಿ.ಮೀ. ವಿಭಾಗಗಳನ್ನು ಒಳಗೊಂಡಿದೆ. ಕಾರ್ಯಕ್ರಮ ಸಂಜೆ 5.30ಕ್ಕೆ ಪ್ರಾರಂಭವಾಗುತ್ತದೆ. ಇದು ಸಂಜೆ ಓಟದ ವಿಶಿಷ್ಟ ಅನುಭವ ನೀಡುತ್ತದೆ ಎಂದು ಹೇಳಿದರು. ಹೆಲ್ತಿಯನ್‌ನ ಚೀಫ್ ಗ್ರೋಥ್ ಆಫೀಸರ್ ಪ್ರಭು, ರೆನೋವಾ ಆಸ್ಪತ್ರೆಗಳ ಸಿಇಒ ರವೀಂದ್ರನಾಥ್ ಮತ್ತು ರಾಮೋಜಿ ಫಿಲ್ಮ್ ಸಿಟಿಯ ಉಪಾಧ್ಯಕ್ಷ (ಮಾರ್ಕೆಟಿಂಗ್) ಎ.ವಿ. ರಾವ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
