ಉದಯವಾಹಿನಿ, ತಿರುಪತಿ(ಆಂಧ್ರ ಪ್ರದೇಶ): ಇಂದು ಚಂದ್ರಗ್ರಹಣ. ಈ ಹಿನ್ನೆಲೆಯಲ್ಲಿ ಜಗತ್ತಿನ ಶ್ರೀಮಂತ ದೇಗುಲ ತಿರುಮಲದ ಶ್ರೀ ವೆಂಕಟೇಶ್ವರ ದೇಗುಲದ ದ್ವಾರವನ್ನು 10 ಗಂಟೆಗಳ ಕಾಲ ಮುಚ್ಚಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ತಿಳಿಸಿದೆ.
ಮಧ್ಯಾಹ್ನ 3.20ರಿಂದ 6.47ರವರೆಗೆ ಚಂದ್ರ ಗ್ರಹಣ ಕಾಲವಿದ್ದು, ದೇಗುಲದ ಸಂಪ್ರದಾಯದಂತೆ ಗ್ರಹಣಕ್ಕೆ ಸುಮಾರು ಆರು ಗಂಟೆ ಮುನ್ನ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಗ್ರಹಣ ಮುಗಿದ ಬಳಿಕ ಸಂಜೆ 8.30ರ ನಂತರ ಶುದ್ದಿಕಾರ್ಯವಾದ ಮೇಲೆ ಮತ್ತೆ ಭಕ್ತರಿಗೆ ದೇಗುಲ ದರ್ಶನ ಮುಕ್ತವಾಗುತ್ತದೆ ಎಂದು ಮಾಹಿತಿ ನೀಡಿದೆ.

ಶ್ರೀ ವೆಂಕಟೇಶ್ವರ ದೇಗುಲ ಮಾತ್ರವಲ್ಲದೆ ಟಿಟಿಡಿ ವ್ಯಾಪ್ತಿಯಲ್ಲಿ ಬರುವ ಶ್ರೀ ಗೋವಿಂದರಾಜ ಸ್ವಾಮಿ ದೇಗುಲ, ನಾರಾಯಣವನಂ, ಕಾರ್ವೇಟಿನಗರಂ, ನಾಗಲಾಪುರಂ, ಬುಗ್ಗಾ, ಸತ್ರವಾಡ, ನಗರಿ, ತಾರಿಗೊಂಡ, ವಯಲ್ಪಾಡ್ ಮತ್ತು ಕೊಸುವಾರಿಪಲ್ಲಿ ದೇಗುಲಗಳನ್ನೂ ಕೂಡ ಹತ್ತು ಗಂಟೆಗಳ ಕಾಲ ಮುಚ್ಚಲಾಗುತ್ತದೆ. ಗ್ರಹಣ ಕಾಲ ಮುಗಿದು ಶುದ್ಧೀಕರಣ ವಿಧಿಗಳಾದ ಮೇಲೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಸಿಗಲಿದೆ.ಗ್ರಹಣದ ಹಿನ್ನೆಲೆಯಲ್ಲಿ ದೇಗುಲದಲ್ಲಿ ನಡೆಯುವ ದಿನದ ಸೇವೆಗಳಾದ ಅಷ್ಟದಳ ಪಾದಪದ್ಮಾರಾಧನ ಸೇವೆ, ಉಂಜಲ್ ಸೇವೆ ಮತ್ತು ಆರ್ಜಿತ ಬ್ರಹ್ಮೋತ್ಸವ ಸೇರಿದಂತೆ ಹಲವಾರು ಸೇವೆಗಳನ್ನು ರದ್ದುಗೊಳಿಸಲಾಗಿದೆ. ವಿಐಪಿ ಬ್ರೇಕ್​ ದರ್ಶನ, ಶ್ರೀವಾಣಿ ದರ್ಶನ, 300 ರೂಪಾಯಿ ವಿಶೇಷ ದರ್ಶನ, ಎನ್​ಆರ್​ಐ ದರ್ಶನ ಕೂಡ ರದ್ದು ಮಾಡಲಾಗಿದೆ.

ಭಾರತದಲ್ಲಿ ಭಾಗಶಃ ಚಂದ್ರ ಗ್ರಹಣ: ಇಂದು ಸಂಪೂರ್ಣ ಚಂದ್ರಗ್ರಹಣ ಸಂಭವಿಸಿದರೂ, ಪೂರ್ಣ ಗ್ರಹಣದ ಸಮಯದಲ್ಲಿ ಚಂದ್ರ ದಿಗಂತದ ಕೆಳಗಿರುವುದರಿಂದ ಭಾರತದಲ್ಲಿ ಭಾಗಶಃ ಹಂತದ ಗ್ರಹಣ ಮಾತ್ರ ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಎಂಪಿ ಬಿರ್ಲಾ ತಾರಾಲಯದ ಮಾಜಿ ನಿರ್ದೇಶಕ ಡಾ. ದೇಬಿನ್ರೋಸಾದ್ ದುವಾರಿ ತಿಳಿಸಿದ್ದಾರೆ. ಭಾರತದಲ್ಲಿ ಕೇವಲ ಭಾಗಶಃ ಚಂದ್ರಗ್ರಹಣ ಮಾತ್ರ ಗೋಚರಿಸುತ್ತದೆ. ಪೂರ್ಣ ಗ್ರಹಣ ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ಪೆಸಿಫಿಕ್‌ ವಲಯದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.

ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.20ಕ್ಕೆ ಗ್ರಹಣ ಪ್ರಾರಂಭವಾಗಿ, ಚಂದ್ರ ನಿಧಾನವಾಗಿ ಭೂಮಿಯ ನೆರಳಿನಿಂದ ಆವರಿಸಿಕೊಳ್ಳುತ್ತಾನೆ. ಸಂಜೆ 4.34ಕ್ಕೆ ಪೂರ್ಣ ಗ್ರಹಣ ಪ್ರಾರಂಭವಾಗಿ 5.32ರವರೆಗೆ ಇರುತ್ತದೆ. ಚಂದ್ರ 58 ನಿಮಿಷಗಳ ಕಾಲ ಭೂಮಿಯ ನೆರಳಿನಲ್ಲಿ ಇರುತ್ತಾನೆ.

Leave a Reply

Your email address will not be published. Required fields are marked *

error: Content is protected !!