
ಉದಯವಾಹಿನಿ, ನ್ಯೂಯಾರ್ಕ್(ಯುಎಸ್ಎ): ಇರಾನ್-ಇಸ್ರೇಲ್-ಅಮೆರಿಕದ ಸಂಘರ್ಷದಿಂದಾಗಿ ಪ್ರಮುಖ ಜಲಮಾರ್ಗವಾದ ಹಾರ್ಮುಜ್ ಈಗಾಗಲೇ ಬಂದ್ ಮಾಡಲಾಗಿದೆ. ಅದೇ ರೀತಿ ಮಧ್ಯಪ್ರಾಚ್ಯದ ಹಲವು ದೇಶಗಳು ದಾಳಿ ಹಿನ್ನೆಲೆಯಲ್ಲಿ ತಮ್ಮ ವಾಯುಮಾರ್ಗವನ್ನು ಮುಚ್ಚಿವೆ. ಇದರಿಂದ ಜಲ ಮತ್ತು ವಾಯು ಮಾರ್ಗ ಬಂದ್ ಆಗಿ ನಾಗರಿಕ ಮತ್ತು ವಾಣಿಜ್ಯ ಸಂಚಾರ ಸ್ಥಗಿತಗೊಂಡಿದೆ.
ಇರಾನ್ ಜಲಸಂಧಿಯನ್ನು ಬಂದ್ ಮಾಡುವ ಮೂಲಕ ತೈಲ ಹೊತ್ತ ಹಡಗುಗಳು ಸಾಗದಂತೆ ನಿರ್ಬಂಧ ಹೇರಿದೆ. ಇದು ಜಾಗತಿಕ ತೈಲ ಪೂರೈಕೆಯ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಇತ್ತ ಭಾರತದ ಔಷಧಗಳು, ಏಷ್ಯಾದ ವಸ್ತುಗಳು ಮತ್ತು ಮಧ್ಯಪ್ರಾಚ್ಯದಿಂದ ಬರುವ ರಸಗೊಬ್ಬರ ಉತ್ಪನ್ನಗಳ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಲಿದೆ.
ಸರಕು ಸಾಗಣೆಯ ಹಡಗುಗಳು ಕೊಲ್ಲಿಯಲ್ಲಿ ಸಿಲುಕಿಕೊಂಡಿವೆ ಅಥವಾ ಆಫ್ರಿಕಾದ ದಕ್ಷಿಣ ತುದಿಯನ್ನು ಸುತ್ತು ಹಾಕಿ ದೀರ್ಘ ಸಂಚಾರ ನಡೆಸುತ್ತಿವೆ. ಈ ಯುದ್ಧವು ಹೆಚ್ಚು ಕಾಲ ಮುಂದುವರಿದರೆ, ಸರಕುಗಳ ಕೊರತೆ ಮತ್ತು ಬೆಲೆ ಏರಿಕೆಯಾಗುವುದು ಖಂಡಿತ.
ಸಮುದ್ರದಲ್ಲಿ ಲಂಗರು ಹಾಕಿದ ಹಡಗುಗಳು: ಸುಮಾರು 3,200 ಹಡಗುಗಳು ಪರ್ಷಿಯನ್ ಕೊಲ್ಲಿಯೊಳಗೆ ಲಂಗರು ಹಾಕಿವೆ. ಇದರಲ್ಲಿ ಸುಮಾರು 1,231 ಹಡಗುಗಳು ಗಲ್ಫ್ ರಾಷ್ಟ್ರಗಳೊಳಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಜಾಗತಿಕ ಸಂಚಾರ ನಡೆಸುವ ಸುಮಾರು 500 ಹಡಗುಗಳು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್ ಕರಾವಳಿಯ ಬಂದರುಗಳಲ್ಲಿ ಬೀಡುಬಿಟ್ಟಿವೆ.ಹಾರ್ಮುಜ್ ಜಲಮಾರ್ಗವನ್ನು ಮತ್ತೆ ಸಂಚಾರಕ್ಕೆ ತೆರೆಯುವಂತೆ ಕ್ರಮ ವಹಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹಾಗೊಂದು ವೇಳೆ ಅಸ್ಥಿರತೆ ಮುಂದುವರಿದಲ್ಲಿ ಅಮೆರಿಕದ ನೌಕಾಪಡೆಯು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ತೈಲ ಟ್ಯಾಂಕರ್‌ಗಳಿಗೆ ಬೆಂಗಾವಲು ನೀಡುತ್ತದೆ ಎಂದು ಅವರು ಹೇಳಿದರು.
