ಉದಯವಾಹಿನಿ, ಜಕಾರ್ತಾ, ಇಂಡೋನೇಷ್ಯಾ: ಇಂಡೋನೇಷ್ಯಾದಲ್ಲಿ 6.2ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ -NCS ವರದಿ ಮಾಡಿದೆ. X ಪೋಸ್ಟ್‌ನಲ್ಲಿ ವಿವರಗಳನ್ನು ಹಂಚಿಕೊಂಡ NCS, ಬೆಳಗ್ಗೆ 10:26 IST ಕ್ಕೆ 20 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಮಾಹಿತಿ ನೀಡಿದೆ.

ಕಳೆದ ಫೆಬ್ರವರಿಯಲ್ಲಿ ಇಂಡೋನೇಷ್ಯಾದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈಗ ಮಾರ್ಚ್​ ನಲ್ಲಿ ಮತ್ತೆ ಭೂಮಿ ಕಂಪಿಸಿದ ವರದಿ ಆಗಿದೆ. ಇಂಡೋನೇಷ್ಯಾ ಭೂಕಂಪಗಳು, ಸುನಾಮಿಗಳು, ಜ್ವಾಲಾಮುಖಿ ಸ್ಫೋಟ, ಚಂಡಮಾರುತ, ಪ್ರವಾಹ, ಭೂಕುಸಿತ ಮತ್ತು ಬರ ಸೇರಿದಂತೆ ಬಹು ನೈಸರ್ಗಿಕ ಅಪಾಯಗಳಿಗೆ ಆಗಾಗ ತುತ್ತಾಗುತ್ತಲೇ ಇರುತ್ತದೆ. ಪೆಸಿಫಿಕ್ ರಿಂಗ್ ಆಫ್ ಫೈರ್‌ನಲ್ಲಿ ಮತ್ತು ಮೂರು ಸಕ್ರಿಯ ಟೆಕ್ಟೋನಿಕ್ ಪ್ಲೇಟ್‌ಗಳ ಛೇದಕದಲ್ಲಿ ನೆಲೆಗೊಂಡಿರುವ ದೇಶ ಈ ಇಂಡೋನೇಷ್ಯಾ ಆಗಿದೆ. ಹೀಗಾಗಿ ಇಲ್ಲಿ ಗಮನಾರ್ಹವಾದ ಭೂಕಂಪ ಮತ್ತು ಜ್ವಾಲಾಮುಖಿ ಚಟುವಟಿಕೆಗಳು ಆಗಾಗ್ಗೆ ಸಂಭವಿಸುತ್ತಲೇ ಇರುತ್ತವೆ. ಇಂಡೋನೇಷ್ಯಾ ತೀವ್ರ ಹವಾಮಾನ ವೈಪರೀತ್ಯಗಳಿಗೆ ಗುರಿಯಾಗುತ್ತಲೇ ಇರುತ್ತದೆ.

ಇಂಡೋನೇಷ್ಯಾ ಮೆಗಾಥ್ರಸ್ಟ್ ಭೂಕಂಪಗಳ ಅಪಾಯದಲ್ಲಿದೆ. ಇವು ಅತ್ಯಂತ ಶಕ್ತಿಶಾಲಿ ಎಂಬುದು ಗಮನಿಸಬೇಕಾದ ಅಂಶಗಳಾಗಿವೆ. 2004 ರ ಹಿಂದೂ ಮಹಾಸಾಗರದ ಭೂಕಂಪ ಮತ್ತು ಸುನಾಮಿಯಂತಹ ವಿನಾಶಕಾರಿ ಘಟನೆಗಳಿಗೆ ಇದು ಕಾರಣವಾಗಬಹುದು. ಅಲ್ಲಿ ಅಚೆ ಪ್ರಾಂತ್ಯದ ಕರಾವಳಿಯ ಸುಂದಾ ಮೆಗಾಥ್ರಸ್ಟ್‌ನಿಂದ ಹುಟ್ಟಿದ (M) 9.0 ತೀವ್ರತೆಯ ಭೂಕಂಪವು ಭಾರಿ ಸುನಾಮಿಗೆ ಕಾರಣವಾಗಿತ್ತು. ಆಗ ಸುಮಾರು 230,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
ಇಂಡೋನೇಷ್ಯಾದಲ್ಲಿ ದಿನಕ್ಕೆ ಸರಾಸರಿ 20 ಭೂಕಂಪಗಳು ಸಂಭವಿಸುತ್ತವೆ. ಇದರಲ್ಲಿ ಹೆಚ್ಚಿನವು ತುಂಬಾ ದುರ್ಬಲ ಕಂಪನಗಳಾಗಿವೆ.

Leave a Reply

Your email address will not be published. Required fields are marked *

error: Content is protected !!