
ಉದಯವಾಹಿನಿ, ಔರಾದ್ : ಕೆಲವೊಮ್ಮೆ ಒಂದೊಂದು ಮತವೂ ಎಷ್ಟು ಮಹತ್ವದ್ದಾಗಿರುತ್ತದೆ ಎಂಬುವುದಕ್ಕೆ ಜಂಬಗಿ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣಾ ಫಲಿತಾಂಶ ಸಾಕ್ಷಿಯಾಗಿದೆ. ಈ ಗ್ರಾಪಂ ಅಧ್ಯಕ್ಷರ ಫಲಿತಾಂಶ ಎಲ್ಲರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಕಂದಗೂಳ ಗ್ರಾಮದ ಸದಸ್ಯೆ ಸುಮನಬಾಯಿ ಬಾಬುರಾವ ಪಾಟೀಲ್, ವಲ್ಲೇಪೂರ ಗ್ರಾಮದ ಸದಸ್ಯ ಬಾಬುರಾವ ಕಲ್ಯಾಣರಾವ ಮಸ್ಕಲೆ ಅವರು ಸಮ ಮತ ಪಡೆಯುವ ಮೂಲಕ ಸಾಕಷ್ಟು ರೋಚಕತೆ ಸೃಷ್ಟಿಸಿತ್ತು. ರಾತ್ರಿ 8 : 30 ಗಂಟೆಯವರೆಗೆ ಜಿದ್ದಾಜಿದ್ದಿನ ಪೈಪೋಟಿ, ವಾಗ್ದಾಳಿ ನಡೆಯಿತು. ಬಳಿಕ ತಹಸೀಲ್ದಾರ ಮಲ್ಲಿಕಾರ್ಜುನ ಹಾಗೂ ಜಿಲ್ಲಾಧಿಕಾರಿ ಗೋವಿಂದರಡ್ಡಿ ಅವರ ಗಮನಕ್ಕೆ ತರಲಾಯಿತು.
ಅವರ ಆದೇಶದಂತೆ ಅಂತಿಮವಾಗಿ ನಿಯಮಾನುಸಾರ ಚೀಟಿ ಎತ್ತುವ ಮೂಲಕ ಚುನಾವಣಾಧಿಕಾರಿಗಳು ಅಭ್ಯರ್ಥಿಯ ಆಯ್ಕೆ ನಡೆಸಿದರು. ಅದೃಷ್ಟ ಸುಮನಬಾಯಿ ಬಾಬುರಾವ ಪಾಟೀಲ್ ಪರವಾಗಿತ್ತು. ಬಾಬುರಾವ ಕಲ್ಯಾಣರಾವ ಮಸ್ಕಲೆ ಅವರಿಗೆ ಕೈ ಬಂದ ತುತ್ತು ಬಾಯಿಗೆ ಬರದಂತಾಗಿತ್ತು. ಇನ್ನೂ ಉಪಾಧ್ಯಕ್ಷರ ಚುನಾವಣೆಗೆ ವಲ್ಲೇಪೂರ ಗ್ರಾಮದ ರುಕ್ಮೀಣಿ ಪಂಡರಿ ಗಾಯಕವಾಡ ಅವರಿಗೆ 10 ಮತಗಳು ಚಲಾವಣೆಯಾದರೇ, ಸ್ವರೂಪರಾಣಿ ದಯಾನಂದ ಅವರಿಗೆ 9 ಮತಗಳು ಚಲಾವಣೆಯಾಗಿದ್ದು, ರುಕ್ಮೀಣಿ ಪಂಡರಿ ಅವರು 1 ಮತದಿಂದ ಗೆಲುವು ಸಾಧಿಸಿದರು. ಚುನಾವಣಾಧಿಕಾರಿಯಾದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸುಭಾಷ ದಾಲಗೊಂಡೆ ಅಧ್ಯಕ್ಷ-ಉಪಾಧ್ಯಕ್ಷರ ಘೋಷಣೆ ಮಾಡಿದರು. ಈ ವೇಳೆ ಪಿಡಿಒ ಶರಣಪ್ಪ ಗಾದಗೆ, ಸಿಪಿಐ ಮಲ್ಲಿಕಾರ್ಜುನ ಒಕ್ಕಳಕಿ, ಚಿಂತಾಕಿ ಪಿಎಸ್ ಐ ಸಿದ್ದಲಿಂಗ ಸಂಗಶೆಟ್ಟಿ, ಸಂತಪೂರ ಪಿಎಸ್ಐ ಸಿದ್ದಣ್ಣ ಗಿರಿಗೌಡಾ ಸೇರಿ ತಾಪಂ, ಗ್ರಾಪಂ ಸಿಬ್ಬಂದಿಗಳು ಇದ್ದರು.
ಸಮಬಲ: ಈ ಗ್ರಾಪಂನಲ್ಲಿ 19 ಸದಸ್ಯರ ಬಲವಿದ್ದು, ಅಧ್ಯಕ್ಷ ಸ್ಥಾನಕ್ಕೆ ಸುಮನಬಾಯಿ ಬಾಬುರಾವ ಪಾಟೀಲ್, ಬಾಬುರಾವ ಕಲ್ಯಾಣರಾವ ಮಸ್ಕಲೆ ಕಣದಲ್ಲಿದ್ದರು. ಗ್ರಾಪಂ ಸದಸ್ಯೆ ಚಿನ್ನಮ್ಮ ಬಂಡೆಪ್ಪ ಎನ್ನುವರ ಮತದಾನ ತಿರಸ್ಕಾರಗೊಂಡಿದ್ದು, ಇಬ್ಬರಿಗೂ ತಲಾ 9 ಮತಗಳು ಚಲಾವಣೆಯಾಗುವ ಮೂಲಕ ಇಬ್ಬರು ನಡುವೆ ಜಿದ್ದಾಜಿದ್ದಿನ ಅಖಾಡ ಏರ್ಪಟ್ಟಿತ್ತು. ಮತ್ತೊಮ್ಮೆ ಮರು ಮತ ಎಣಿಕೆ ನಡೆಸಲಾಯಿತು. ಈ ವೇಳೆ ಕೂಡ ಈ ಇಬ್ಬರು ಅಭ್ಯರ್ಥಿಗಳ ಮತಗಳಿಕೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ. ಈ ಕಾರಣದಿಂದ ನಿಯಮಾನುಸಾರ ಚುನಾವಣಾಧಿಕಾರಿಗಳು ಚೀಟಿ ಎತ್ತುವ ಮೂಲಕ ಆಯ್ಕೆ ನಡೆಸಲು ಮುಂದಾದರು. ಚೀಟಿ ಆಯ್ಕೆಯಲ್ಲಿ ಸುಮನಬಾಯಿ ಪಾಟೀಲ್ ಅವರ ಹೆಸರು ಬಂದಿತು.
