ಉದಯವಾಹಿನಿ, ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ದಿಕ್ಕು ದೆಸೆ ಇಲ್ಲದ ಪ್ರಗತಿ ಶೂನ್ಯ ಬಜೆಟ್ ಆಗಿದ್ದು, ಸಾಲದ ಶೂಲಕ್ಕೆ ರಾಜ್ಯವನ್ನು ತೆಗೆದುಕೊಂಡು ಹೋಗುವ ಬಜೆಟ್ ಇದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಕಳಪೆ ಬಜೆಟ್, ಅಭಿವೃದ್ದಿ ಶೂನ್ಯ, ಪ್ರಗತಿ ರಹಿತವಾದ ಅತಿ ಹೆಚ್ಚು ಸಾಲ ಮಾಡಿರುವ ಬಜೆಟ್ ಇದಾಗಿದೆ. 1.32 ಲಕ್ಷ ಕೋಟಿ ರೂ. ಸಾಲ ಮಾಡಿ, ಸುಮಾರು 25 ಸಾವಿರ ಕೋಟಿ ರೂ. ಹೊಸ ತೆರಿಗೆ ಹಾಕಿ, 22 ಸಾವಿರ ಕೋಟಿ ರೂ. ಕೊರತೆ ಬಜೆಟ್ ಮಂಡನೆ ಮಾಡಿದ್ದಾರೆ. ದಿಕ್ಕು ದೆಸೆ ಇಲ್ಲದ ಪ್ರಗತಿ ಶೂನ್ಯ, ಸಾಲದ ಶೂಲಕ್ಕೆ ರಾಜ್ಯವನ್ನು ತೆಗೆದುಕೊಂಡು ಹೋಗುವ ಬಜೆಟ್. ಇದರಿಂದ ದೂರಗಾಮಿ ರಾಜದ ಹಣಕಾಸಿನ ಮೇಲೆ ಬಹಳ ದೊಡ್ಡ ಪರಿಣಾಮ ಬೀರಲಿದೆ. ರಾಜ್ಯವನ್ನು ಹತ್ತರಿಂದ 15 ವರ್ಷ ಹಿಂದೆ ತೆಗೆದುಕೊಂಡು ಹೋಗುತ್ತದೆ. ಇದರಿಂದ ನಿರಾಸೆಯಾಗಿದೆ. 17 ಬಾರಿ ಬಜೆಟ್ ಮಂಡನೆ ಮಾಡಿರುವ ಸಿಎಂರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದರು
