ಉದಯವಾಹಿನಿ, ನವದೆಹಲಿ: ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ನೇಮಕಾತಿ ಮತ್ತು ವರ್ಗಾವಣೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮೋದನೆ ನೀಡಿದ್ದಾರೆ.ರಾಷ್ಟ್ರಪತಿಗಳ ಅಧಿಕೃತ ಅಧಿಸೂಚನೆಯಂತೆ ಕೆಲ ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಿಸಿ, ಇನ್ನೂ ಕೆಲವೆಡೆ ವರ್ಗಾವಣೆ ಮಾಡಲಾಗಿದೆ. ಹಾಗೆಯೇ ಕೇಂದ್ರಾಡಳಿತ ಪ್ರದೇಶಗಳಿಗೆ ಲೆಫ್ಟಿನೆಂಟ್ ಗವರ್ನರ್ ನೇಮಕಾತಿಯನ್ನು ಮಾಡಲಾಗಿದೆ.
ತೆಲಂಗಾಣದ ರಾಜ್ಯಪಾಲರಾಗಿದ್ದ ಜಿಷ್ಣು ದೇವ್ ವರ್ಮಾ ಅವರನ್ನು ಮಹಾರಾಷ್ಟ್ರಕ್ಕೆ ವರ್ಗಾವಣೆ ಮಾಡಲಾಗಿದೆ. ಇನ್ನೂ ತೆಲಂಗಾಣಕ್ಕೆ ಹಿಮಾಚಲ ಪ್ರದೇಶದ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರನ್ನು ನೇಮಿಸಲಾಗಿದೆ.
ಬಿಹಾರದ ಮಾಜಿ ಸಚಿವ ನಂದ ಕಿಶೋರ್ ಯಾದವ್ ಅವರನ್ನು ನಾಗಾಲ್ಯಾಂಡ್ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಹಾಗೆಯೇ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರನ್ನು ಬಿಹಾರದ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ಆನಂದ ಬೋಸ್ ಅವರ ರಾಜೀನಾಮೆಯ ಬೆನ್ನಲ್ಲೇ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ವರ್ಗಾಯಿಸಲಾಗಿದೆ. ಹಾಗೆಯೇ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ತಮಿಳುನಾಡು ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಕೇಂದ್ರಾಡಳಿತ ಪ್ರದೇಶ ಲಡಾಖ್ ಲೆಫ್ಟಿನೆಂಟ್ ಗವರ್ನರ್ ಕವಿಂದರ್ ಗುಪ್ತಾ ಅವರನ್ನು ಹಿಮಾಚಲ ಪ್ರದೇಶದ ರಾಜ್ಯಪಾಲರನ್ನಾಗಿ ವರ್ಗಾಯಿಸಲಾಗಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕವಾಗಿದ್ದಾರೆ.
ಅಮೆರಿಕದಲ್ಲಿದ್ದ ಭಾರತದ ಮಾಜಿ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರನ್ನು ದೆಹಲಿಯ ಹೊಸ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿದೆ.
ನೇಮಕಗೊಂಡವರು ಅಧಿಕಾರ ವಹಿಸಿಕೊಂಡ ನಂತರ ಎಲ್ಲಾ ನೇಮಕಾತಿ ಮತ್ತು ವರ್ಗಾವಣೆಗಳು ಜಾರಿಗೆ ಬರಲಿವೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
