ಉದಯವಾಹಿನಿ, ತೇಜ್‌ಪುರ (ಅಸ್ಸಾಂ): ಅಸ್ಸಾಂನಲ್ಲಿ ತರಬೇತಿ ಕಾರ್ಯಾಚರಣೆ ವೇಳೆ ಪತನಗೊಂಡಿದ್ದ ಸುಖೋಯ್ Su-30MKI ಯುದ್ಧ ವಿಮಾನ ಪತ್ತೆಯಾಗಿದ್ದು, ವಿಮಾನದಲ್ಲಿದ್ದ ಇಬ್ಬರು ಪೈಲಟ್ಗಳು ಸಾವನ್ನಪ್ಪಿರುವುದಾಗಿ ಭಾರತೀಯ ವಾಯುಪಡೆ ತಿಳಿಸಿದೆ.
Su-30MKI ಯುದ್ಧ ವಿಮಾನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಅವರು ಮೃತಪಟ್ಟಿದ್ದಾರೆ. ಐಎಎಫ್‌ನ ಎಲ್ಲಾ ಸಿಬ್ಬಂದಿಯು ಮೃತ ಯೋಧರಿಗೆ ಸಂತಾಪ ವ್ಯಕ್ತಪಡಿಸುತ್ತಾರೆ. ಮತ್ತು ಈ ದುಃಖದ ಸಮಯದಲ್ಲಿ ಮೃತರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತಾರೆ ಎಂದು ಭಾರತೀಯ ವಾಯುಪಡೆ ಹೇಳಿದೆ.
ತರಬೇತಿ ಕಾರ್ಯಾಚರಣೆಯಲ್ಲಿದ್ದ ಭಾರತೀಯ ವಾಯುಪಡೆಯ ಸುಖೋಯ್ Su-30MKI ಯುದ್ಧ ವಿಮಾನವು ಗುರುವಾರ ರಾತ್ರಿ ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಪತನಗೊಂಡಿತ್ತು. ಜೋರ್ಹತ್‌ನಿಂದ ಸುಮಾರು 60 ಕಿ.ಮೀ ದೂರದಲ್ಲಿ ಘಟನೆ ನಡೆದಿತ್ತು. ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಭಾರತೀಯ ವಾಯುಪಡೆ ತಿಳಿಸಿತ್ತು. ಗುರುವಾರ ಸಂಜೆ 7.42 ರ ಸುಮಾರಿಗೆ ಅಸ್ಸಾಂನ ಜೋರ್ಹತ್‌ನಿಂದ ಟೇಕ್ ಆಫ್ ಆದ, ಭಾರತೀಯ ವಾಯುಪಡೆ ಯುದ್ಧ ವಿಮಾನ ಸುಖೋಯ್ Su-30 MKI ಸ್ವಲ್ಪ ಸಮಯದಲ್ಲೇ ಸಂಪರ್ಕ ಕಳೆದುಕೊಂಡಿತ್ತು ಎಂದು ತಡವಾಗಿ ವರದಿಯಾಗಿತ್ತು.
