ಉದಯವಾಹಿನಿ, ಕಠ್ಮಂಡು (ನೇಪಾಳ): ಜೆನ್​ ಝಿ ಪ್ರತಿಭಟನೆ ಬಳಿಕ ನೇಪಾಳದಲ್ಲಿ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಇಂದು ಮತದಾನ ಆರಂಭವಾಗಿದ್ದು, ನೇಪಾಳದ ಮಧ್ಯಂತರ ಪ್ರಧಾನಿ ಸುಶೀಲ ಕರ್ಕಿ ಮತದಾನ ಮಾಡಿದರು. ತಮ್ಮ ಕರ್ತವ್ಯ ಪೂರ್ಣಗೊಂಡಿದ್ದು, ಜನರು ನಿರ್ಭಯವಾಗಿ ತಮ್ಮ ಮತದಾನದ ಹಕ್ಕು ಚಲಾಯಿಸಬೇಕು ಎಂದು ಕರೆ ನೀಡಿದ್ದಾರೆ.
ಜೆನ್​ ಝಿ ಪ್ರತಿಭಟನೆಯ ಮೂಲಕ ಕಳೆದ ವರ್ಷ ಕೆ ಪಿ ಶರ್ಮಾ ಒಲಿ ನೇತೃತ್ವದ ಸರ್ಕಾರ ಪದಚ್ಯುತಗೊಂಡ ಬಳಿಕ ನಡೆಯುತ್ತಿರುವ ನಿರ್ಣಾಯಕ ಸಾರ್ವತ್ರಿಕ ಚುನಾವಣೆ ಇದಾಗಿದೆ. ಕಳೆದ ವರ್ಷ ನೇಪಾಳದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿನ ಬಳಿಕ ಮಾಜಿ ಪ್ರಧಾನಿ ಕೆ ಪಿ ಶರ್ಮಾ ಓಲಿ ಸೇರಿದಂತೆ ಅನೇಕ ರಾಜಕೀಯ ನಾಯಕರ ರಾಜೀನಾಮೆ ನೀಡಿದರು. ಹೊಸ ಸರ್ಕಾರ ರಚನೆವರೆಗೆ ಮಧ್ಯಂತರ ಪ್ರಧಾನಿಯಾಗಿ ಸುಶೀಲ ಕರ್ಕಿ ಕಾರ್ಯ ನಿರ್ವಹಿಸಿದರು.
275 ಸದಸ್ಯ ಪ್ರತಿನಿಧಿಗಳ ಆಯ್ಕೆಗೆ ಮತದಾನ ಪ್ರಾರಂಭವಾಗಿದ್ದು, 165 ಸ್ಥಾನಗಳಿಗೆ ನೇರ ಮತದಾನ ಸಾಗಲಿದ್ದು 3,406 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇನ್ನುಳಿದ 110 ಸ್ಥಾನಗಳನ್ನು ಅನುಪಾತದ ಪ್ರಾತಿನಿಧ್ಯದ ಮೂಲಕ ಆಯ್ಕೆ ಮಾಡಲಾಗುತ್ತದೆ. ಇಂದು ಬೆಳಗ್ಗೆ 7ರಿಂದ ಮತದಾನ ಪ್ರಾರಂಭವಾಗಿದ್ದು, ಸಂಜೆ 5ರವರೆಗೆ ಸಾಗಲಿದೆ. ಒಟ್ಟು 18.9 ಮಿಲಿಯನ್​ ಅರ್ಹ ಮತದಾರರು ಮತ ಚಲಾವಣೆ ಮಾಡಲಿದ್ದಾರೆ.

ಚುನಾವಣಾ ಆಯೋಗದ ವಕ್ತಾರ ನಾರಾಯಣ್ ಪ್ರಸಾದ್ ಭಟ್ಟಾರೈ ಮಾತನಾಡಿ, ದೇಶಾದ್ಯಂತ ಶಾಂತಿಯುತವಾಗಿ ಚುನಾವಣೆ ಪ್ರಾರಂಭವಾಗಿದೆ. ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಳಿಗೆ ಎಲ್ಲಾ ವ್ಯವಸ್ಥೆ ನಡೆಸಲಾಗಿದ್ದು, ಚುನಾವಣೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಮತದಾರರು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಮತ್ತು ಉತ್ಸಾಹದಿಂದ ಭಾಗವಹಿಸಿ ಎಂದು ಅವರು ಕೋರಿದರು.

ನೇಪಾಳವು ಚುನಾವಣೆಗೆ ಮೂರು ದಿನಗಳ ರಜೆ ಘೋಷಿಸಿದೆ. ಒಟ್ಟು 10,967 ಮತಗಟ್ಟೆಗಳು ಮತ್ತು 23,112 ಮತದಾನ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ ಎಂದು ಚುನಾವಣಾ ಆಯೋಗದ ತಿಳಿಸಿದ್ದು, ಚುನಾವಣೆಯಲ್ಲಿ ಸುಮಾರು 65 ರಾಜಕೀಯ ಪಕ್ಷಗಳು ಭಾಗವಹಿಸಿವೆ. ಕಳೆದ ಸೆಪ್ಟೆಂಬರ್​ನಲ್ಲಿ ಭ್ರಷ್ಟಾಚಾರ ವಿರೋಧಿ, ಉತ್ತಮ ಆಡಳಿತ, ಸ್ವಜನಪಕ್ಷಪಾತದ ಅಂತ್ಯ, ರಾಜಕೀಯ ನಾಯಕತ್ವದಲ್ಲಿ ಪೀಳಿಗೆಯ ಬದಲಾವಣೆಗಾಗಿ ನೇಪಾಳದ ಜೆನ್​ಝಿಗಳು ಬೀದಿಗಿಳೀದು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಬೆನ್ನಲ್ಲೇ ಓಲಿ ತಮ್ಮ ಸರ್ಕಾರಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಅಧ್ಯಕ್ಷ ರಾಮಚಂದ್ರ ಪೌಡೆಲ್ ಸೆಪ್ಟೆಂಬರ್ 12 ರಂದು ಪ್ರತಿನಿಧಿಗಳ ಸಭೆಯನ್ನು ವಿಸರ್ಜಿಸಿ ಸುಶೀಲಾ ಕರ್ಕಿಯನ್ನು ಹಂಗಾಮಿ ಪ್ರಧಾನಿಯಾಗಿ ನೇಮಿಸಿದ್ದರು.

Leave a Reply

Your email address will not be published. Required fields are marked *

error: Content is protected !!