ಉದಯವಾಹಿನಿ, ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್​​ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವಿಗೆ ಭಾರತ ಇಂದು ಸಂತಾಪ ಸೂಚಿಸಿತು. ಭಾರತದಲ್ಲಿನ ಇರಾನ್​ ರಾಯಭಾರಿ ಕಚೇರಿಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್​ ಮಿಸ್ರಿ ಅವರು ಗುರುವಾರ ಭೇಟಿ ನೀಡುವ ಮೂಲಕ ಭಾರತ ಸರ್ಕಾರದ ಪರವಾಗಿ ಸಂತಾಪ ಸಂದೇಶ ರವಾನಿಸಿದರು. ಇರಾನ್ ರಾಯಭಾರ ಕಚೇರಿಗೆ ಭೇಟಿ ವೇಳೆ ಸಂತಾಪ ಸೂಚಿಸುವ ಪುಸ್ತಕದಲ್ಲಿ ಸಹಿ ಕೂಡ ಹಾಕಿದರು.
ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಅವರೊಂದಿಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್​ ಮಿಸ್ರಿ ಅವರು ಸಂಭಾಷಣೆ ನಡೆಸುತ್ತಿರುವ ಫೋಟೋವನ್ನು ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದೆ.

ದಾಳಿಯಲ್ಲಿ ಮೃತಪಟ್ಟ ಖಮೇನಿ: ಇರಾನ್​ ಮೇಲೆ ಇಸ್ರೇಲ್​ ಮತ್ತು ಅಮೆರಿಕದ ಪಡೆಗಳು ಜಂಟಿಯಾಗಿ ಫೆಬ್ರವರಿ 28ರಂದು ದಾಳಿ ನಡೆಸಿದವು. ಖಮೇನಿ ಇದ್ದ ನಿವಾಸವನ್ನು ದೊಡ್ಡ ಕ್ಷಿಪಣಿಗಳನ್ನು ಬಳಸಿ ಸ್ಫೋಟಿಸಲಾಗಿತ್ತು. ಈ ವೇಳೆ ಭದ್ರತಾ ಕೊಠಡಿಯಿಂದ ಹೊರಬಂದಿದ್ದ ಖಮೇನಿ ದಾಳಿಗೆ ಬಲಿಯಾಗಿದ್ದರು.ಸರ್ವೋಚ್ಚ ನಾಯಕನ ಜೊತೆಗೆ 40ಕ್ಕೂ ಹೆಚ್ಚು ಉನ್ನತ ಅಧಿಕಾರಿಗಳು ಸಾವಿಗೀಡಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಇರಾನ್​ ಅಮೆರಿಕದ ನೆಲೆಗಳು ಇರುವ ಮಧ್ಯಪ್ರಾಚ್ಯದ ಹಲವು ದೇಶಗಳ ಮೇಲೆ ಬಾಂಬ್​ಗಳ ಸುರಿಮಳೆ ಸುರಿಯುತ್ತಿದೆ.

ಇಸ್ರೇಲ್​-ಅಮೆರಿಕದ ಭೀಕರ ದಾಳಿಗೆ ಸಿಲುಕಿರುವ ಇರಾನ್​ನಲ್ಲಿ 1200 ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. ಇದರಲ್ಲಿ 200 ಶಾಲಾ ಮಕ್ಕಳು ಇದ್ದಾರೆ ಎಂಬುದು ಖೇದದ ಸಂಗತಿ.

ಸರ್ಕಾರದ ನಿಲುವು ಪ್ರಶ್ನಿಸಿದ್ದ ವಿಪಕ್ಷಗಳು: ಇರಾನ್​- ಇಸ್ರೇಲ್​ ಮತ್ತು ಅಮೆರಿಕ ಸಂಘರ್ಷವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಭಾರತ ಕರೆ ನೀಡಿತ್ತಾದರೂ, ಅಲಿ ಖಮೇನಿ ಸಾವಿನ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಇರಾನ್​ನ ಸರ್ವೋಚ್ಚ ನಾಯಕ ಅಲಿ ಖಮೇನಿಯನ್ನು ದಾಳಿಯಲ್ಲಿ ಹತ್ಯೆ ಮಾಡಿದ ಬಗ್ಗೆ ಭಾರತ ಸರ್ಕಾರ ತನ್ನ ನಿಲುವು ತಿಳಿಸಬೇಕು ಎಂದು ವಿಪಕ್ಷಗಳು ಒತ್ತಾಯಿಸಿದ್ದವು. ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ, ವಿಪಕ್ಷ ನಾಯಕ ರಾಹುಲ್​ ಗಾಂಧಿ ಸೇರಿದಂತೆ ಹಲವು ನಾಯಕರು ಸರ್ಕಾರದ ಮೌನವನ್ನು ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ, ಇರಾನ್ ರಾಯಭಾರ ಕಚೇರಿಗೆ ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಭೇಟಿ ನೀಡಿ ಸಂತಾಪ ಸೂಚಿಸುವ ಪುಸ್ತಕಕ್ಕೆ ಸಹಿ ಹಾಕಿರುವುದು ಮಹತ್ವ ಪಡೆದುಕೊಂಡಿದೆ.

Leave a Reply

Your email address will not be published. Required fields are marked *

error: Content is protected !!