ಉದಯವಾಹಿನಿ, ಕರುನಾಡಿನ ಮನೆಮನಗಳಲ್ಲಿ ಒಂದಾಗಿರುವ ಕಲರ್ಸ್ ಕನ್ನಡ ವಾಹಿನಿ, ಭರಪೂರ್ ಮನರಂಜನೆ ನೀಡುವುದರಲ್ಲಿ ಯಾವಾಗಲೂ ಮುಂಚೂಣಿ. ವೈವಿಧ್ಯಮಯ ಮೆಗಾ ಧಾರಾವಾಹಿಗಳು ಮತ್ತು ನಕ್ಕು ನಗಿಸುವ ರಿಯಾಲಿಟಿ ಶೋಗಳ ಮೂಲಕ ವೀಕ್ಷಕರ ಪ್ರೀತಿ ಗಳಿಸಿರುವ ವಾಹಿನಿ, ಇದೀಗ ಕರುನಾಡ ವೀಕ್ಷಕರ ಮಡಿಲಿಗೆ ಮನಮಿಡಿಯುವ ಕತೆಯೊಂದನ್ನು ಹೊತ್ತು ತರುತ್ತಿದೆ. ಅದುವೇ ಅಮ್ಮ-ಮಗಳ ನಿಷ್ಕಲ್ಮಶ ಪ್ರೀತಿಯ ಮಹಾಕಾವ್ಯ ‘ರಾಣಿ’ ಧಾರಾವಾಹಿ. ಇದೇ ಮಾರ್ಚ್ 9 ರಿಂದ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಆರಂಭಿಸಲಿದ್ದು, ವೀಕ್ಷಕರಿಗೆ ಹೊಸದೊಂದು ಭಾವಲೋಕವನ್ನು ಪರಿಚಯಿಸಲಿದೆ.
ರಾಣಿ () ಕೇವಲ ಅಪರಾಧ ಅಥವಾ ಜೈಲಿನ ಕಥೆಯಲ್ಲ. ಬದಲಾಗಿ ವಿಧಿಯಾಟದಿಂದಾಗಿ ಸೆರೆಮನೆಯ ಕಂಬಿಗಳ ನಡುವೆಯೇ ಹುಟ್ಟಿ, ಹೊರಗಿನ ಜಗತ್ತನ್ನೇ ಕಾಣದ ಮುಗ್ಧ ಮಗು ರಾಣಿ ಮತ್ತು ಮಗಳಿಗಾಗಿ ಹಂಬಲಿಸುವ ತಾಯಿಯ ಎದೆತುಂಬಿ ಬರುವ ಕತೆ. ಜೈಲಿನ ಕಲ್ಲು ಗೋಡೆಗಳೇ ತನ್ನ ಪ್ರಪಂಚ ಎಂದು ನಂಬಿರುವ ಪುಟ್ಟ ರಾಣಿಗೆ, ಅಲ್ಲಿನ ಕತ್ತಲಲ್ಲೂ ಸೂರ್ಯನ ಕಿರಣವಾಗಿ ಅಮ್ಮನ ಪ್ರೀತಿ ಸಿಗುತ್ತದೆ. ಆದರೆ, ಕಾನೂನು ಮತ್ತು ವಿಧಿ ಇಬ್ಬರನ್ನೂ ಬೇರ್ಪಡಿಸಲು ನಿಂತಾಗ, ಆ ಪುಟ್ಟ ಜೀವ ತನ್ನ ತಾಯಿಯನ್ನು ಮರಳಿ ಪಡೆಯಲು ನಡೆಸುವ ಹೋರಾಟ ಪ್ರೇಕ್ಷಕರ ಕಣ್ಣಂಚನ್ನು ಒದ್ದೆ ಮಾಡುವುದು ಖಚಿತ. ಪ್ರೋಮೋಗಳಲ್ಲಿ ಕಂಡ ಆ ಪುಟ್ಟ ಮಗುವಿನ ಆರ್ದ್ರತೆ ಕನ್ನಡಿಗರ ಹೃದಯಕ್ಕೆ ನೇರವಾಗಿ ತಟ್ಟಿದೆ.
