
ಉದಯವಾಹಿನಿ, ದೇವರಹಿಪ್ಪರಗಿ: ಸಹಕಾರ ರಂಗದ ಪ್ರಗತಿ ಹಾಗೂ ಏಳಿಗೆಯಲ್ಲಿ ಸಹಕಾರಿ ಸಂಘಗಳ ಪಾತ್ರ ಬಹುಮುಖ್ಯವಾಗಿದ್ದು , ಶಿವಣಗಿ ಗ್ರಾಮದ ಸರ್ವರ ಸಹಕಾರದಿಂದ ಈ ಸಹಕಾರಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಕಾರ್ಯ ಶ್ಲಾಘನೀಯ ಎಂದು ಬಾಲಗಾ೦ವ ಗುರುದೇವ ಆಶ್ರಮದ ಪರಮಪೂಜ್ಯ ಶ್ರೀ ಅಮೃತಾನಂದ ಶ್ರೀಗಳು ಹೇಳಿದರು.
ಪಟ್ಟಣದ ಸಮೀಪವಿರುವ ಶಿವಣಗಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಬಹು ಉದ್ದೇಶ ಸೇವಾಕೇಂದ್ರದ ಉದ್ಘಾಟನಾ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ್ದ ನಾಗಠಾಣ ಮತಕ್ಷೇತ್ರದ ಜನಪ್ರೀಯ ಶಾಸಕರಾದ ವಿಠ್ಠಲ ಕಟಕದೊಂಡ ಅವರು ಮಾತನಾಡುತ್ತಾ ರೈತಸ್ನೇಹಿಯಾಗಿ ಕೃಷಿ ಪತ್ತಿನ ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸಿದಾಗ ಮಾತ್ರ ರೈತರ ಹಾಗೂ ಬ್ಯಾಂಕಿನ ಅಭಿವೃದ್ಧಿ ಸಾಧ್ಯ ಹಾಗೂ ಈ ಬ್ಯಾಂಕು ನಾಡಿನ ಪ್ರಮುಖ ರೈತಸ್ನೇಹಿ ಬ್ಯಾಂಕಾಗಿ ಹೆಸರಾಗಲಿ ಎಂದು ಹಾರೈಸಿದರು.ಪ್ರಾಸ್ತಾವಿಕವಾಗಿ ಡಿಸಿಸಿ ಬ್ಯಾಂಕಿನ ನಿವೃತ್ತ ಅಧಿಕಾರಿಗಳು ಹಾಗೂ ತರಬೇತಿ ಸಂಯೋಜಕರಾದ ಆರ್ ಎಮ್ ಬಣಕಾರ ಅವರು ಮಾತನಾಡಿದರು.ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಬಂಥನಾಳದ ವೃಷಭಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ವೃಷಭಲಿಂಗೇಶ್ವರ ಮಹಾಸ್ವಾಮಿಗಳು, ಕನ್ನೊಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು,ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕರಾಗಿರುವ ರಾಜುಗೌಡ ಪಾಟೀಲ ಕುದುರಿ ಸಾಲವಾಡಗಿ ಹಾಗೂ ವಿಜಯಪುರದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿರುವ ರಾಜಶೇಖರ ಗುಡದಿನ್ನಿ ಅವರುಗಳು ಮಾತನಾಡಿ ಉತ್ತರೋತ್ತರವಾಗಿ ಬ್ಯಾಂಕು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿ ಸಲಹೆ ಸೂಚನೆಗಳನ್ನು ನೀಡಿದರು. ಹೊಸದಾಗಿ ಪ್ರಾರಂಭವಾದ ಬಹು ಉದ್ದೆಶ ಸೇವಾಕೇಂದ್ರವನ್ನು ನಾಗಠಾಣ ಶಾಸಕರಾಗಿರುವ ವಿಟ್ಠಲ ಕಟಕದೊಂಡ ಅವರು ಉದ್ಘಾಟಿಸಿದರು. ಸಹಕಾರಿ ಧ್ವಜಾರೋಹಣವನ್ನು ಡಿಸಿಸಿ ಬ್ಯಾಂಕಿನ ಡಿಜಿಎಮ್ ಆಗಿರುವ ಸತೀಶ್ ಡಿ ಪಾಟೀಲ ಅವರು ನೆರವೇರಿಸಿದರು.ರಾಜಶೇಖರ ಗುಡದಿನ್ನಿ ಅವರು ಜ್ಯೋತಿ ಬೆಳಗಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಕೆಪಿಎಸ್ ಅಧ್ಯಕ್ಷರಾದ ರವಿ ಈ ಜೇವರಗಿಯವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ವಾಯ್ ಎಸ್ ಕಂಬಾರ,ಡಿ ಸಿ ಬಿರಾದಾರ,ಎಸ್ ಎಸ್ ರೆಡ್ಡಿ ಜೆ ಕೆ ಕೊರಬು,ಬಿ ಎ ಹೆಬ್ಬಾಳ,ಪಿ ಎಮ್ ದೊಡಮನಿ,ಶ್ರೀಶೈಲ ಹದರಿ,ವಿರುಪಾಕ್ಷಿ ರೋಡಗಿ ಸೇರಿದಂತೆ ನೂರಾರು ಗ್ರಾಮಸ್ಥರು, ರೈತರು ಉಪಸ್ಥಿತರಿದ್ದರು.ಪಿ ಕೆ ಸುಬಾನಪ್ಪಗೋಳ ಅವರು ಕಾರ್ಯಕ್ರಮವನ್ನು ನಿರೂಪಿಸಿದರೆ,ಕ್ಷೇತ್ರಾಧಿಕಾರಿಗಳಾದ ಶ್ರೀಮತಿ ಆರ್ ವಿ ಗುಣದಾಳಮಠ ಅವರು ವಂದಿಸಿದರು.
