ಉದಯವಾಹಿನಿ, ರಾಯಚೂರು: ಕಸದ ರಾಶಿಗೆ ಹಚ್ಚಿದ್ದ ಕಿಡಿ ತಗುಲಿ ಗೋದಾಮು ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಸಿಂಧನೂರು ನಗರದ ಸುಖಾಲಪೇಟೆಯಲ್ಲಿ ನಡೆದಿದೆ. ಯೂಸುಫ್ ಅಂಬರ್ ಖಾನ್ ಎಂಬುವವರಿಗೆ ಸೇರಿದ ಗೋದಾಮಿನಲ್ಲಿದ್ದ ವಸ್ತುಗಳು ಅಗ್ನಿಗಾಹುತಿಯಾಗಿವೆ. ಗೋದಾಮಿನ ಹಿಂಭಾಗದ ಖಾಲಿ ಜಾಗದಲ್ಲಿ ಕಸಕ್ಕೆ ಬೆಂಕಿ ಹಚ್ಚಲಾಗಿತ್ತು. ಗೋದಾಮಿನಲ್ಲಿದ್ದ ಆರ್‌ಎನ್‌ಆರ್ ಭತ್ತದ ಸುಮಾರು 750 ಚೀಲಗಳು, 50ಕ್ಕೂ ಹೆಚ್ಚು ಗೊಬ್ಬರದ ಚೀಲಗಳು ಸುಟ್ಟು ಭಸ್ಮವಾಗಿವೆ. ಬೆಂಕಿ ಅವಘಡದಿಂದ 20 ಲಕ್ಷ ರೂ.ಗೂ ಅಧಿಕ ನಷ್ಟವಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಧನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
