ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬಜೆಟ್ ಮೂಲಕ ರಾಜ್ಯದ ಜನತೆಗೆ ನಿರಾಶೆ ಉಂಟು ಮಾಡಿದ್ದಾರೆ. ಯಾವುದೇ ದೂರದೃಷ್ಟಿ ಇಲ್ಲದ ನೀರಸ ಆಯವ್ಯಯ ಪತ್ರ ಇದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ  ಅವರು ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಒಬ್ಬ ಅನುಭವಿ ಮುಖ್ಯಮಂತ್ರಿಗಳಿದ್ದು, 17ನೇ ಬಜೆಟ್ ಮಂಡಿಸುವ ಸುವರ್ಣಾವಕಾಶ ಅವರಿಗೆ ಸಿಕ್ಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀರಿನಲ್ಲಿ ಹೋಮ ಮಾಡುವ ಕೆಲಸವನ್ನು ಮಾಡಿದ್ದಾರೆ. ಯಾವುದೇ ದೂರದೃಷ್ಟಿ ಇಲ್ಲದ ನೀರಸ ಬಜೆಟ್ ಇದು. ಮುಖ್ಯಮಂತ್ರಿಯವರು ಬಜೆಟ್ ಓದುವಾಗ ನಾನು ಆಡಳಿತ ಪಕ್ಷದ ಶಾಸಕರನ್ನು ಗಮನಿಸುತ್ತಿದ್ದೆ. ಯಾವುದೇ ಶಾಸಕರಲ್ಲಿ ಈ ಬಜೆಟ್ ಬಗ್ಗೆ ಆಸಕ್ತಿ ಇಲ್ಲದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು ಎಂದು ನುಡಿದಿದ್ದಾರೆ.

ಮುಖ್ಯಮಂತ್ರಿಗಳು ಬಜೆಟ್ ಓದಲು ಆರಂಭಿಸಿದಾಗ ಅದನ್ನು ಕೇಳುತ್ತಿದ್ದರೆ ಯಾರೋ ಸಾಹಿತಿಗಳು ಬರೆದುಕೊಟ್ಟಂತಿತ್ತು. ಕೇಳುವುದಕ್ಕೆ ತುಂಬ ಚೆನ್ನಾಗಿತ್ತು. ಓದಲೂ ಚೆನ್ನಾಗಿ ಅನಿಸಿರಬಹುದು. ಆದರೆ, ರಾಜ್ಯದ ಜನತೆಗೆ ಯಾವುದೇ ಪ್ರಯೋಜನ ಆಗಿಲ್ಲ. 17ನೇ ಬಜೆಟ್ ಮೂಲಕ ನಾಡಿನ ಜನತೆಗೆ ಚೊಂಬನ್ನು ನೀಡಿದ್ದಾರೆ. ಕಳೆದ 3 ಬಜೆಟ್ ಅನ್ನು ನೋಡಿದರೆ, ಹಿಂದಿನ ಬಜೆಟ್‌ನಲ್ಲಿ 1.16 ಲಕ್ಷ ಕೋಟಿ ರೂ. ಸಾಲ ಮಾಡಿದ್ದರು. ಈ ಬಾರಿ 2025-26ನೇ ಸಾಲಿಗೆ 1.32 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಕಳೆದ 3 ವರ್ಷಗಳಲ್ಲಿ 4.39 ಲಕ್ಷ ಕೋಟಿ ರೂ. ಸಾಲ ಮಾಡಿದ್ದೇ ಸಿದ್ದರಾಮಯ್ಯನವರ ದಾಖಲೆ ಎಂದು ಟೀಕಿಸಿದ್ದಾರೆ. ಆಡಳಿತ ಪಕ್ಷದ ಶಾಸಕರು ಹಿರಿಯ ಶಾಸಕರ ಹತ್ತಿರ ತೆರಳಿ ಮುಖ್ಯಮಂತ್ರಿಗಳು ಪಂಗನಾಮ ಹಾಕಿದ್ದಾರೆ ಎಂದು ತಿಳಿಸಿದ್ದನ್ನು ಗಮನಿಸಿದ್ದಾಗಿ ವಿವರಿಸಿದರು. ಕೇವಲ ಏಳೆಂಟು ಸಚಿವರಷ್ಟೇ ಇದ್ದರು. ಬೇರೆ ಸಚಿವರಿಗೆ, ಆಡಳಿತ ಪಕ್ಷದ ಶಾಸಕರಿಗೆ ಈ ಬಜೆಟ್ ಬಗ್ಗೆ ಆಸಕ್ತಿ ಇರಲಿಲ್ಲ ಎಂದು ಆಕ್ಷೇಪಿಸಿದರು.

 

Leave a Reply

Your email address will not be published. Required fields are marked *

error: Content is protected !!