ಉದಯವಾಹಿನಿ, ಶಿವಮೊಗ್ಗ: ವಿಮಾನಯಾನ ಕ್ಷೇತ್ರದ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಶಿವಮೊಗ್ಗ ಏರ್‌ಪೋರ್ಟ್‌ ಆವರಣದಲ್ಲಿ ಫ್ಲೈಟ್ ಟ್ರೈನಿಂಗ್ ಸ್ಕೂಲ್ ಹಾಗೂ ಏರ್‌ಕ್ರಾಫ್ಟ್ ಮ್ಯಾನುಫ್ಯಾಕ್ಚರಿಂಗ್ ಅಸೆಂಬ್ಲಿ ಸ್ಥಾಪಿಸಲು ಸರ್ಕಾರ ಮುಂದಾಗಿದೆ ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿನ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಯೋಜನೆ ಜಾರಿಗೆ ಬಂದರೆ ಶಿವಮೊಗ್ಗ ವಿಮಾನ ನಿಲ್ದಾಣವು ಕೇವಲ ಪ್ರಯಾಣಿಕರ ಸೇವೆಗೆ ಮಾತ್ರ ಸೀಮಿತವಾಗದೇ, ವಿಮಾನಯಾನ ತರಬೇತಿ ಹಾಗೂ ಏರೋಸ್ಪೇಸ್ ಕೈಗಾರಿಕಾ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ಬೆಳೆಯುವ ನಿರೀಕ್ಷೆಯಿದೆ. ಇದರಿಂದ ಸ್ಥಳೀಯ ಯುವಕರಿಗೆ ವಿಮಾನಯಾನ ಕ್ಷೇತ್ರದಲ್ಲಿ ತರಬೇತಿ ಮತ್ತು ಉದ್ಯೋಗಾವಕಾಶಗಳು ಹೆಚ್ಚುವ ಸಾಧ್ಯತೆಯೂ ಇದೆ.

ಈ ಬಗ್ಗೆ ಕಳೆದ ವರ್ಷ ಮೇ ತಿಂಗಳಲ್ಲೇ ಸಚಿವ ಎಂ.ಬಿ ಪಾಟೀಲ್‌ ಮಾಹಿತಿ ನೀಡಿದ್ದರು. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಾಯುಯಾನ ತರಬೇತಿ ಸಂಸ್ಥೆ (ಎಫ್‌ಟಿಒ) ಸ್ಥಾಪನೆಗೆ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ಯೋಜನೆ ರೂಪಿಸಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಎಫ್‌ಟಿಒ ಸ್ಥಾಪನೆಗಾಗಿ 3,500 ಚದರ ಮೀ. ವಿಸ್ತೀರ್ಣದ ಜಾಗ ನೀಡಲಾಗುತ್ತಿದ್ದು, ಅದರಲ್ಲಿ 1,500 ಚದರ ಮೀ. ಅನ್ನು ವಿಮಾನಗಳ ಹ್ಯಾಂಗರ್‌ಗಳಿಗೆ, 2 ಸಾವಿರ ಚದರ ಮೀ. ತರಗತಿ ಕೊಠಡಿ, ಕಚೇರಿಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!