ಉದಯವಾಹಿನಿ, ಟೆಹ್ರಾನ್: ಇಸ್ರೇಲ್ ಮತ್ತು ಅಮೆರಿಕದೊಂದಿಗಿನ ಯುದ್ಧದ ಸಮಯದಲ್ಲಿ ನಡೆಸಲಾದ ದಾಳಿಗಳಿಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ನೆರೆಯ ರಾಷ್ಟ್ರಗಳಿಗೆ ಕ್ಷಮೆಯಾಚಿಸಿದ್ದಾರೆ. ‘ಇರಾನ್ ದಾಳಿ ಮಾಡಿದ ನೆರೆಯ ರಾಷ್ಟ್ರಗಳಿಗೆ ನಾನು ನನ್ನ ಪರವಾಗಿ ಮತ್ತು ಇರಾನ್ ಪರವಾಗಿ ಕ್ಷಮೆಯಾಚಿಸಬೇಕು. ಆ ದೇಶಗಳಿಂದ ದಾಳಿಯಾಗದಿದ್ದರೆ, ನೆರೆ ರಾಷ್ಟ್ರಗಳ ಮೇಲೆ ಇನ್ಮುಂದೆ ನಾವು ಯಾವುದೇ ದಾಳಿ ಮಾಡಲ್ಲ. ಯಾವುದೇ ಕ್ಷಿಪಣಿಗಳನ್ನು ಹಾರಿಸುವುದಿಲ್ಲ ಎಂದು ನಿನ್ನೆ ಮಧ್ಯಂತರ ನಾಯಕತ್ವ ಮಂಡಳಿ ಒಪ್ಪಿಕೊಂಡಿತು.
ಪರಮಾಣು ಮಾತುಕತೆಗಳು ಸ್ಥಗಿತಗೊಂಡು, ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಪುನರಾರಂಭಿಸಿದೆ ಎಂದು ಹೇಳಿಕೊಂಡ ಬೆನ್ನಲ್ಲೇ ಫೆ.28 ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್‌ನಾದ್ಯಂತ ಸಂಘಟಿತ ವೈಮಾನಿಕ ದಾಳಿಗಳನ್ನು ನಡೆಸಿದವು. ‘ಆಪರೇಷನ್ ಎಪಿಕ್ ಫ್ಯೂರಿ’ ಎಂದು ಹೆಸರಿಸಲಾದ ಈ ದಾಳಿಗಳು ರಾಜಧಾನಿ ಟೆಹ್ರಾನ್ ಸೇರಿದಂತೆ ಅನೇಕ ಇರಾನಿನ ನಗರಗಳನ್ನು ಗುರಿಯಾಗಿಸಿಕೊಂಡು ನಡೆದವು. ದಾಳಿಯಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ, ಅವರ ಪತ್ನಿ, ಮಗಳು, ಅಳಿಯ ಮತ್ತು ಮೊಮ್ಮಗಳು ಹತ್ಯೆಯಾಗಿದ್ದಾರೆ.
