ಉದಯವಾಹಿನಿ, ಬೆಂಗಳೂರು: ನಕಲಿ ಪೊಲೀಸರನ್ನು ಕಳುಹಿಸಿ ಮನೆ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಸ್ನೇಹಿತನ ಮನೆ ರಾಬರಿ ಮಾಡಿಸಿದ ಸ್ಟ್ಯಾಂಪ್ ವೆಂಡರ್ ಅರೆಸ್ಟ್ ಆಗಿದ್ದಾನೆ.ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್‌ನಲ್ಲಿರುವ ಹೊಂಬೇಗೌಡರ ಮನೆಗೆ ನಕಲಿ ಸಬ್ ಇನ್ಸ್‌ಪೆಕ್ಟರ್ ಕಳುಹಿಸಿ ಮಾಡಿಸಿ ದರೋಡೆ ಮಾಡಲಾಗಿತ್ತು. ಸ್ನೇಹಿತನ ಸೈಟ್ ಮಾರಾಟದ ಹಣಕ್ಕಾಗಿ ನಕಲಿ ಸಬ್ ಇನ್ಸ್‌ಪೆಕ್ಟರ್ ವೇಷಧಾರಿಗಳ ಮೂಲಕ ದರೋಡೆ ಮಾಡಿಸಿದ್ದ ಸ್ಟ್ಯಾಂಪ್ ವೆಂಡರ್ ಬೆಟ್ಟೇಗೌಡ (52) ಎಂಬಾತನನ್ನು ಬ್ಯಾಡರಹಳ್ಳಿ ಪೊಲೀಸರು ಈಗ ಬಂಧಿಸಿದ್ದಾರೆ.
ದರೋಡೆ ಹೇಗೆ?: ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ನಾಗೇಂದ್ರ ಎಂಬಾತನಿಗೆ ಕರೆ ಮಾಡಿ, ನನ್ನ ಬಳಿಯೇ ಹೊಂಬೇಗೌಡ ಪೇಪರ್ ಮಾಡಿಸಿ ಸೈಟ್ ಮಾರಿದ್ದಾನೆ. ಮನೆಯಲ್ಲಿ ಸಾಕಷ್ಟು ಹಣವಿದೆ. ದರೋಡೆ ಮಾಡಿ ಎಂದು ಬೆಟ್ಟೇಗೌಡ ಸೂಚಿಸಿದ್ದ. ಬೆಟ್ಟೇಗೌಡನ ಸೂಚನೆಯಂತೆ ನಾಗೇಂದ್ರ, ಶಿವಾಜಿನಗರದಲ್ಲಿ ಶೂಟಿಂಗ್‌ಗಾಗಿ ಬಳಸುವ ಸಬ್ ಇನ್ಸ್‌ಪೆಕ್ಟರ್ ಸಮವಸ್ತ್ರವನ್ನು ಬಾಡಿಗೆಗೆ ತಂದಿದ್ದ. ಪೊಲೀಸ್ ಸಮವಸ್ತ್ರದಲ್ಲಿಯೇ ಹೊಂಬೇಗೌಡರ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದನ್ನು ದರೋಡೆ ಮಾಡಿದ್ದನು.
