ಉದಯವಾಹಿನಿ, ಬೆಂಗಳೂರು: ಕಳೆದ 20 ವರ್ಷಗಳಿಂದ ಯಾವ ಸರ್ಕಾರಗಳು ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡಿರಲಿಲ್ಲ. ನಮ್ಮ ಸರ್ಕಾರ ಈ ಬಗ್ಗೆ ಪ್ರಾಮುಖ್ಯತೆ ನೀಡಿದ್ದು, ಈ ಬಾರಿ ಬಜೆಟ್ನಲ್ಲಿ 2 ಸಾವಿರ ಕೋಟಿ ಮೀಸಲಿಟ್ಟಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಕಳೆದ ಬಾರಿ ಬಜೆಟ್ನಲ್ಲಿ ಸೇತುವೆ ನಿರ್ಮಾಣಕ್ಕಾಗಿ ಹಣ ಇಟ್ಟಿದ್ದರು. ಈ ಬಾರಿಯೂ ಮುಂದುವರೆಸುವಂತೆ ಮನವಿ ಮಾಡಿದ್ದೆ. ಇದರಂತೆ 2 ಸಾವಿರ ಕೋಟಿ ರೂ. ಹಣವನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ನೀಡಿದ್ದಾರೆ. 20 ವರ್ಷಗಳಿಂದ ಯಾವ ಸರ್ಕಾರಗಳು ಸೇತುವೆ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಈ ಬಗ್ಗೆ ಸರ್ವೇ ನಡೆಸಿದಾಗ ಸೇತುವೆ ಅಗತ್ಯತೆ ಬಗ್ಗೆ ತಿಳಿದುಬಂದಿತ್ತು. ನೀಡಿರುವ ಅನುದಾನ ಬಳಸಿಕೊಂಡು ಬ್ರಿಡ್ಜ್ಗಳನ್ನ ನಿರ್ಮಿಸುತ್ತೇವೆ ಎಂದರು.
ಸುಮಾರು 80ರಿಂದ 100 ವಿಧಾನಸಭಾ ಕ್ಷೇತ್ರಗಳಲ್ಲಿ ಲಭ್ಯವಿರುವ ಅನುದಾನ ಬಳಸಿಕೊಂಡು ಸೇತುವೆ ನಿರ್ಮಿಸಲಾಗುವುದು. ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆಯಡಿ (ಕೆ-ಶಿಪ್) ಸುಮಾರು 60 ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಮಾಡಲಾಗುವುದು. ಲಭ್ಯವಿರುವ ಅನುದಾನ ನಿರ್ವಹಣೆ ಮಾಡಲು ಸಾಧ್ಯವಾಗಲಿದೆ ಎಂದರು. ಆದಾಯ ಕೊರತೆ ಬಜೆಟ್ ಮಂಡನೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಎಲ್ಲ ಮುಖ್ಯಮಂತ್ರಿಗಳು ಸಾಲ ಮಾಡಿಯೇ ಬಜೆಟ್ ಮಂಡಿಸಿದ್ದಾರೆ. ಸಾಲವಿಲ್ಲದೇ ಬ್ಯಾಲೆನ್ಸ್ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಪರಿಸ್ಥಿತಿ ಇದೇ ಆಗಿದೆ ಎಂದರು. ಗ್ಯಾರಂಟಿ ಯೋಜನೆಗಳನ್ನ ರದ್ದು ಮಾಡಿಲ್ಲ. ಮುಖ್ಯವಾಗಿ ಯುವನಿಧಿ ಯೋಜನೆಯನ್ನ ತೆಗೆದುಹಾಕಿಲ್ಲ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಗುತ್ತಿಗೆದಾರರ ಬಾಕಿ ಹಣ ಒತ್ತಾಯಿಸಿ ಪ್ರತಿಭಟನೆ ಸಂಬಂಧ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿಗಳು ಹಣಕಾಸು ಇಲಾಖೆಯ ಹೆಡ್ ಆಗಿದ್ದಾರೆ. ಈ ಬಗ್ಗೆ ಅವರ ಗಮನಕ್ಕೆ ತಂದು ಶೀಘ್ರದಲ್ಲಿ ಗುತ್ತಿಗೆದಾರರೊಂದಿಗೆ ಕುಳಿತು ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.ಬಜೆಟ್ ವಿರೋಧಿಸಿ ಪ್ರತಿಪಕ್ಷ ಬಿಜೆಪಿಯಿಂದ ಚೊಂಬು ಇಟ್ಟು ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡದಿದ್ದಾಗ ನಾವು ಚೊಂಬು ಹಿಡಿದಿದ್ದೆವು. ರಾಜ್ಯದಲ್ಲಿ ಬಿಜೆಪಿ ಹಿಡಿದಿದೆ. ಇವೆಲ್ಲಾ ಸಾಮಾನ್ಯವಾಗಿದೆ ಎಂದರು.
