ಉದಯವಾಹಿನಿ, ರಾಯಚೂರು: ಬಿಸಿಲ ಝಳ ದಿನ ದಿನಕ್ಕೆ ಏರಿಕೆಯಾಗುತ್ತಿದೆ. ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ಮಾರ್ಚ್ ತಿಂಗಳಾರಂಭದಲ್ಲೇ ತಾಪ ಹೆಚ್ಚಾಗಿದ್ದು ಜನರು ಹೈರಾಣಾಗಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಬಿಸಿಲ ಬೇಗೆ ಏರುವ ಮುನ್ಸೂಚನೆ ಸಿಕ್ಕಿದೆ.
ಏಪ್ರಿಲ್, ಮೇ ತಿಂಗಳಲ್ಲಿ ಅಧಿಕೃತವಾಗಿ ಬೇಸಿಗೆ ಶುರುವಾಗುತ್ತದೆ. ಆದರೆ ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾರ್ಚ್‌ನಲ್ಲೇ ಹೆಚ್ಚು ತಾಪಮಾನ ದಾಖಲಾಗುತ್ತಿದೆ.
ಪ್ರಸಕ್ತ ಬೇಸಿಗೆಯಲ್ಲಿ 45 ಡಿಗ್ರಿ ಸೆಲ್ಸಿಯಸ್​​ನಿಂದ 46 ಡಿಗ್ರಿ ಸೆಲ್ಸಿಯಸ್​ನಷ್ಟು ತಾಪಮಾನ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಎರಡು ತಿಂಗಳಲ್ಲಿ ಸಾಮಾನ್ಯ ಉಷ್ಣಾಂಶದ ವಾತಾವರಣವಿರಲಿದ್ದು, ಎರಡ್ಮೂರು ಬಾರಿ 45ರಿಂದ 46 ಡಿಗ್ರಿ ಸೆಲ್ಸಿಯಸ್​​ವರೆಗೂ ದಾಖಲಾಗುವ ಸಾಧ್ಯತೆಯಿದೆ ಎಂದು ಕೃಷಿ ವಿವಿಯ ಹವಾಮಾನ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ಮಧ್ಯಾಹ್ನದ ವೇಳೆ ನಗರದ ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ ಕಡಿಮೆಯಾಗಲಿದೆ ಮತ್ತು ಜನಸಂದಣಿ ಇದ್ದ ಪ್ರದೇಶಗಳಲ್ಲಿಯೂ ಓಡಾಟ ಬಹುತೇಕ ಕಡಿಮೆಯಾಗಲಿದೆ. ವಿಶೇಷವಾಗಿ ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಿಗಳು ಮತ್ತು ಹೊರಾಂಗಣದಲ್ಲಿ ಕೆಲಸ ಮಾಡುವವರು ಬಿಸಿಲಿನ ತೀವ್ರತೆಗೆ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ಕೆಲಸದ ಸಮಯವನ್ನು ಬೆಳಗ್ಗೆ ಹಾಗೂ ಸಂಜೆ ವೇಳೆಗೆ ಮಿತಿಗೊಳಿಸಿ ಬಿಸಿಲಿನಿಂದ ರಕ್ಷಣೆಗೆ ಮುಂದಾಗುತ್ತಿದ್ದಾರೆ. ಮಧ್ಯಾಹ್ನ ರೈತರು ಹೊಲದಲ್ಲಿ ಕೆಲಸ ಮಾಡುವುದು ಹಾಗೂ ಜಾನುವಾರುಗಳನ್ನು ಹೊರಗೆ ಬಿಡುವುದನ್ನು ಮಾಡಬಾರದು. ಈ ಕೆಲಸಗಳನ್ನು ಇಳಿಸಂಜೆ ಮತ್ತು ಬೆಳಗ್ಗೆ ಮುಗಿಸಿಕೊಳ್ಳುವುದು ಉತ್ತಮ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಬಿಸಿಲಿನ ತೀವ್ರತೆಯಿಂದ ಜನರು ತಲೆಗೆ ಟೋಪಿ ಹಾಕಿಕೊಂಡು ಇಲ್ಲವೇ ಬಟ್ಟೆ ಸುತ್ತಿಕೊಂಡು ಸಂಚರಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ದೇಹದ ತಾಪಮಾನ ಕಡಿಮೆ ಮಾಡಲು ತಣ್ಣೀರು, ಜ್ಯೂಸ್ ಹಾಗೂ ಮಜ್ಜಿಗೆ ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ. ದಾಹ ನೀಗಿಸಿಕೊಳ್ಳಲು ಜನರು ನಗರದಲ್ಲಿನ ಜ್ಯೂಸ್ ಕೇಂದ್ರಗಳ ಮೊರೆ ಹೋಗುತ್ತಿದ್ದಾರೆ.  ಸ್ಥಳೀಯರ ಪ್ರಕಾರ, ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪಮಾನದಲ್ಲಿ ಏರಿಕೆ ಕಂಡುಬಂದಿದ್ದು, ಮಧ್ಯಾಹ್ನ ವೇಳೆಗೆ ಹೊರಗೆ ಕೆಲಸ ಮಾಡುವುದು ಬಹಳ ಕಷ್ಟಕರವಾಗುತ್ತಿದೆ. ಅಗತ್ಯ ಕೆಲಸವಿದ್ದಾಗ ಮಾತ್ರ ಮನೆಯಿಂದ ಹೊರಹೋಗುತ್ತಿದ್ದಾರೆ.  ಇನ್ನೊಂದೆಡೆ, ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿಯೂ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಸಾರ್ವಜನಿಕರು ಮಧ್ಯಾಹ್ನ ಸಮಯದಲ್ಲಿ ಅನಗತ್ಯವಾಗಿ ಹೊರ ಹೋಗುವುದನ್ನು ತಪ್ಪಿಸಿ, ಹೆಚ್ಚು ನೀರು ಸೇವಿಸುವುದು ಹಾಗೂ ತಲೆ ಮುಚ್ಚಿಕೊಂಡು ಸಂಚರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆ ನೀಡಿದೆ. ಬೇಸಿಗೆಯ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!