ಉದಯವಾಹಿನಿ, ಪಟ್ಟಣದ ಚನ್ನರಾಯಪಟ್ಟಣ: ಕೆ.ಆರ್.ಪೇಟೆ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿರುವ ಒಣಗಿದ ಮರಗಳು ಹಾಗೂ ಪೊಟರೆಬಿದ್ದ ಈಗಲೋ ಆಗಲೋ ಬೀಳುವ ಮರಗಳನ್ನು ಕೆಡವಿ ಮುಂದೆ ಆಗುವ ಅನಾಹುತವನ್ನು ತಪ್ಪಿಸಬೇಕು ಎಂದು ತಾಲ್ಲೂಕು ಹೆಚ್.ಡಿ.ದೇವೇಗೌಡ ಅಭಿಮಾನಿ ಬಳಗದ ಅಧ್ಯಕ್ಷ ಗೌರೀಶ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಪಟ್ಟಣದ ಹೊರವಲಯದಿಂದ ಆರಂಭವಾದರೆ ಚನ್ನರಾಯಪಟ್ಟಣದ ವರೆವಿಗೂ ಮುಖ್ಯರಸ್ತೆಯಲ್ಲಿ ಬೃಹತ್ ಪ್ರಮಾಣದ ಮರಗಳಿದ್ದು ಇವುಗಳು ತುಂಬಾ ವರ್ಷಗಳ ಹಳೆಯದಾದ ಮರಗಳಾಗಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಇಲ್ಲಿ ಪರಿಶೀಲಿಸುವ ಮೂಲಕ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕಿದೆ. ಚನ್ನರಾಯಪಟ್ಟಣ ರಸ್ತೆಯಲ್ಲಿ ಬರುವ ಮತ್ತಿಘಟ್ಟ ಕೃಷ್ಣಮೂರ್ತಿ ಪೆಟ್ರೋಲ್ ಬಂಕ್ ಹಾಗೂ ಬೆಲ್ಲದ ಟೀ ಅಡ್ಡದ ಮುಂಭಾಗದಲ್ಲಿರುವ ಬೃಹತ್ ಗಾತ್ರದ ಮಾವಿನಮರ ಕಳೆದ ಹಲವು ತಿಂಗಳಿನಿAದ ಕೊಂಬೆಗಳು ಮುರಿದು ಬೀಳುತ್ತಿವೆ. ಅಲ್ಲದೇ ಮಾವಿನ ಮರದ ಕಾಂಡದಲ್ಲಿ ಬೃಹತ್ ಪ್ರಮಾಣದ ಪೊಟರೆಯಂತಾಗಿ ಜೋರಾದ ಗಾಳಿಗೆ ಇಡೀ ಮರವೇ ಬೀಳುವ ಸನ್ನಿವೇಶ ಎದುರಾಗಿದೆ. ಅಲ್ಲಿಯೇ ಸಮೀಪವಿರುವ ಹರ್ಕ್ಯುಲಸ್ ಮರ ಸಂಪೂರ್ಣವಾಗಿ ಒಣಗಿ ನಿಂತಿದ್ದು ಯಾವುದೇ ಕ್ಷಣದಲ್ಲಿಯಾದರೂ ರಸ್ತೆಗೆ ಬೀಳುವ ಹಂತದಲ್ಲಿದೆ. ಅಪಾಯಕ್ಕೆ ಆಹ್ವಾನ ನೀಡುವ ಇಂಥಹ ಮರಗಳನ್ನು ತೆರವುಗೊಳಿಸುವ ಕೆಲಸವನ್ನು ಅರಣ್ಯ ಇಲಾಖೆ ತುರ್ತಾಗಿ ಮಾಡಬೇಕಿದೆ. ಇದೇ ರೀತಿ ಮುಖ್ಯರಸ್ತೆಯಲ್ಲಿ ನೋಡುತ್ತಾ ಹೋದರೆ ಸಾಕಷ್ಟು ಮರಗಳು ಒಣಗಿದ್ದು ಮುಂದಿನ ದಿನಗಳು ಮಳೆಗಾಳವಾದ್ದರಿಂದ ಜೋರಾದ ಮಳೆ, ಗಾಳಿಗೆ ಯಾವುದೇ ಕ್ಷಣದಲ್ಲಿ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ಬೀಳುವ ಸಂಭವವಿದೆ. ಅರಣ್ಯ ಇಲಾಖೆಯವರು ಕೂಡಲೇ ಪರಿಶೀಲಿಸಿ ಅವುಗಳನ್ನು ತೆರವುಗೊಳಿಸುವ ಕೆಲಸಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ಬಿದ್ದು ಸಾವುನೋವು ಸಂಭವಿಸುವ ಸಾಧ್ಯತೆ ಇದೆ ಎಂದು ಗೌರೀಶ್ ಆಗ್ರಹಿಸಿದ್ದಾರೆ.
