ಉದಯವಾಹಿನಿ, ಬೆಂಗಳೂರು : ಕಪ್ಪತ್ತಗುಡ್ಡ ವನ್ಯಜೀವಿ ಅಭಯಾರಣ್ಯವನ್ನು 2019ರ ಜನವರಿಯಲ್ಲಿ ಕರ್ನಾಟಕ ರಾಜ್ಯ ವನ್ಯ ಜೀವಿ ಮಂಡಳಿಯ (ಕೆಎಸ್‌ಡಬ್ಲ್ಯೂಬಿ) 11ನೇ ಸಭೆಯಲ್ಲಿ ಅಂಗೀರಿಸಿದ ನಿರ್ಣಯದಂತೆ 300 ಚದರ ಕಿಲೋಮೀಟರ್‌ಗೆ ಹೆಚ್ಚಳ ಮಾಡಿ ಹೊಸದಾಗಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಕಪ್ಪತ್ತುಗುಡ್ಡ ಅರಣ್ಯದಲ್ಲಿನ 244.15 ಚದರ ಕಿಲೋಮೀಟರ್ ಪ್ರದೇಶವನ್ನು ಸೂಕ್ಷ್ಮ ಪ್ರದೇಶ ಎಂಬುದಾಗಿ ಘೋಷಣೆ ಮಾಡಿದ್ದ ಕ್ರಮ ಪ್ರಶ್ನಿಸಿ ಅರಣ್ಯದ ಪರಿಸರ ಸೂಕ್ಷ್ಮ ವಲಯದ ಪಟ್ಟಾ ಭೂಮಿಯಲ್ಲಿ ಕ್ರಷಿಂಗ್ ನಡೆಸುತ್ತಿದ್ದ ಶಿವಗಂಗಾ ಸ್ಟೋನ್ ಕ್ರಷಿಂಗ್ ಇಂಡಸ್ಟ್ರೀಸ್ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದ್ದು, ಈ ಆದೇಶ ನೀಡಿದೆ.
ಅಲ್ಲದೇ, ಕಪ್ಪತ್ತಗುಡ್ಡ ಸಂಪೂರ್ಣ 300 ಚದರ ಕಿಲೋಮೀಟರ್ ವನ್ಯಜೀವಿ ಅಭಯಾರಣ್ಯ ಎಂದು ಘೋಷಣೆ ಮಾಡಲು ಕೆಎಸ್‌ಡಬ್ಲ್ಯೂಬಿಯು ಸರ್ವಾನುಮತದಿಂದ ನಿರ್ಣಯಿಸಿದೆ. ಆದರೂ, 2019ರ ಮೇ 16ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಕೇವಲ 244.15 ಚದರ ಕಿಲೋಮೀಟರ್ ಪ್ರದೇಶವನ್ನು ವನ್ಯಜೀವಿ ಮಂಡಳಿ ಎಂದು ಘೋಷಣೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ನಿರ್ಧಾರಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಅಭಯಾರಣ್ಯ ವಿಸ್ತೀರ್ಣವನ್ನು ಕಡಿತಗೊಳಿಸುವುದು ಮೇಲ್ನೋಟಕ್ಕೆ ವಿವೇಚನಾರಹಿತ ನಿರ್ಧಾರವಾಗಿದೆ. ಅಭಯಾರಣ್ಯಕ್ಕೆ 55 ಚದರ ಕಿಲೋಮೀಟರ್ ಎಡ ಹೊರ ಪ್ರದೇಶವನ್ನು ಸೇರಿಸಿ 300 ಚದರ ಕಿಲೋಮೀಟರ್ ಪ್ರದೇಶವನ್ನು ಅಭಯಾರಣ್ಯ ಎಂಬುದಾಗಿ ಅಧಿಸೂಚನೆ ಹೊರಡಿಸಬೇಕು ಎಂದು ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕಪ್ಪತ್ತಗುಡ್ಡ ವನ್ಯಜೀವಿ ಅಭಯಾರಣ್ಯದ ಸುತ್ತಮುತ್ತಲಿನ 244.15 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಲಾಗಿದೆ. ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ ಪಡೆಯದೇ ಈ ಘೋಷಣೆ ಮಾಡಲಾಗಿದೆ. ಈ ಪರಿಸರ ಸೂಕ್ಷ್ಮ ವಲಯದಲ್ಲಿ ತಮ್ಮ ಜಮೀನು ಬರಲಿದ್ದು, ತಮ್ಮ ವ್ಯವಹಾರಕ್ಕೆ ಅಡ್ಡಿಯಾಗಿದೆ. ಅಲ್ಲದೇ, ಪ್ರಭಾವಿ ವ್ಯಕ್ತಿಗಳ ಒಡೆತನದಲ್ಲಿರುವ ಕೆಲವು ಘಟಕಗಳಿಗೆ ಅನಕೂಲವಾಗುವಂತೆ ಅಧಿಸೂಚನೆ ಹೊರಡಿಸಲಾಗಿದೆ. ಆದ್ದರಿಂದ 2017ರಲ್ಲಿ ಕಪ್ಪತ್ತಗುಡ್ಡ ವನ್ಯಜೀವಿ ಅಭಯಾರಣ್ಯದ ಗಡಿಯನ್ನು ಕೇವಲ 178 ಚದರ ಕಿಲೋಮೀಟರ್‌ಗೆ ಸೀಮಿತಗೊಳಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು. ಸರ್ಕಾರದ ಪರ ವಕೀಲರು, ಕಪ್ಪತ್ತಗುಡ್ಡ ಮೀಸಲು ಅರಣ್ಯ ಪ್ರದೇಶವನ್ನು 288 ಚದರ ಕಿಲೋಮೀಟರ್ ಇದೆ. ಇದನ್ನು 300 ಚದರ ಕಿಲೋಮೀಟರ್ ಎಂಬುದಾಗಿ ರಾಜ್ಯ ವನ್ಯಜೀವಿ ಮಂಡಳಿ ಪ್ರಕಟಿಸಿದ್ದಲ್ಲಿ ದೋಷವಿದೆ ಎಂಬ ಕಾರಣದಿಂದ ವಿಸ್ಥೀರ್ಣ ಕಡಿಮೆ ಮಾಡಲಾಗಿದೆ. ಆದರೆ, ಯಾವ ಕಾರಣಕ್ಕಾಗಿ ಅಭಯಾರಣ್ಯ ಪ್ರದೇಶದ ವಿಸ್ತೀರ್ಣ ಕಡಿಮೆ ಮಾಡಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಲಭ್ಯವಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು. ವಾದ –ಪ್ರತಿವಾದ ಆಲಿಸಿದ ನ್ಯಾಯಪೀಠ ಈ ಆದೇಶ ನೀಡಿದೆ.
