ಉದಯವಾಹಿನಿ, ದಕ್ಷಿಣ ಕನ್ನಡ: “2028ಕ್ಕೆ ರಮಾನಾಥ ರೈ ಅವರೇ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಅವರನ್ನು ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ್ವಾಳದಲ್ಲಿ ಮನವಿ ಮಾಡಿದರು.ಬಂಟ್ವಾಳದ ನಾವೂರು ಕೂಡಿಬೈಲು ಎಂಬಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಶನಿವಾರ ನಡೆದ ಮುಡೂರು ಪಡೂರು ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಂಬಳ ಸಮಿತಿ ವತಿಯಿಂದ ಸಿಎಂಗೆ ಗೌರವಪೂರ್ವಕವಾಗಿ ಕಂಬಳದ ಬೆತ್ತವನ್ನು ನೀಡುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.
2028ಕ್ಕೆ ರೈ ಅವರೇ ಅಭ್ಯರ್ಥಿ: “ರಮಾನಾಥ ರೈ ಅವರು ಶಾಸಕ, ಸಚಿವರಾಗಿದ್ದಾಗ ಬಂಟ್ವಾಳ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರೂ ಜನರು ಸೋಲಿಸಿರುವುದು ನೋವಿನ ಸಂಗತಿಯಾಗಿದೆ. ರಮಾನಾಥ ರೈ ಕ್ಷೇತ್ರಕ್ಕೆ ಐದು ಸಾವಿರ ಕೋಟಿ ರೂಪಾಯಿಯನ್ನು ಕಳೆದ ಅವಧಿಯಲ್ಲಿ ತರಿಸಿ ಅಭಿವೃದ್ಧಿ ಮಾಡಲಾಗಿತ್ತು. ಆದರೂ ಅವರನ್ನು ಕ್ಷೇತ್ರದ ಜನ ಸೋಲಿಸಿದರು. ಇದು ನೋವಿನ ಸಂಗತಿ ಅಲ್ವಾ? ಇನ್ನೊಂದು ಸಾರಿ ಅವರು ನಿಲ್ಲುತ್ತಾರೆ. 2028ಕ್ಕೆ ಮತ್ತೆ ಅಭ್ಯರ್ಥಿ ಆಗುತ್ತಾರೆ, ಪ್ರಾಮಾಣಿಕ ಸಚಿವರಲ್ಲಿ ರಮಾನಾಥ ರೈ ಕೂಡ ಒಬ್ಬರಾಗಿದ್ದರು. ಹೀಗಾಗಿ ಅವರು ಮತ್ತೆ ಗೆಲ್ಲಬೇಕು” ಎಂದರು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಎಂ “ಕಂಬಳ ಅತ್ಯಂತ ಜನಪ್ರಿಯ ಕ್ರೀಡೆ. ಇದಕ್ಕೆ ಎಲ್ಲ ಜಾತಿ, ಧರ್ಮೀಯರು ಸೇರುತ್ತಾರೆ. ಈ ಕ್ರೀಡೆಯನ್ನು ಉಳಿಸಿ, ಬೆಳೆಸುವುದು ನಮ್ಮ ಜವಾಬ್ದಾರಿ. ದಕ್ಷಿಣ ಕನ್ನಡದಲ್ಲಿ ಎಲ್ಲರೂ ಭಾಗವಹಿಸುವ ಕ್ರೀಡೆ. ಮಂಗಳೂರಿನ ಜನರು ಸಾಹಸಪ್ರವೃತ್ತಿ ಇರುವ ಕ್ರೀಡೆಯಾಗಿದ್ದು, ಇಲ್ಲಿ ಕೋಣಗಳನ್ನು ಮಕ್ಕಳ ಥರ ಸಾಕುತ್ತಾರೆ. 2028ಕ್ಕೂ ನಾವೇ ಅಧಿಕಾರಕ್ಕೆ ಬಂದೇ ಬರ್ತೀವಿ. ನಾವು ಅಧಿಕಾರದಲ್ಲಿದ್ದಾಗ ಕಂಬಳಕ್ಕೆ ಏನು ಪ್ರೋತ್ಸಾಹ ನೀಡಬೇಕೋ ಅದಕ್ಕೆ ಪ್ರೋತ್ಸಾಹ ನೀಡುತ್ತೇವೆ. ಕಂಬಳಕ್ಕೆ ಹಣಕಾಸಿನ ನೆರವನ್ನೂ ಕೊಡುತ್ತೇವೆ” ಎಂದು ತಿಳಿಸಿದರು.
ಬಳಿಕ ಕನೆಹಲಗೆಯ ಕೋಣಗಳ ಓಟವನ್ನು ಸಿಎಂ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ, ಕಂಬಳಕ್ಕೆ ರಾಜ್ಯಮಟ್ಟದಲ್ಲಿ ಮಾನ್ಯತೆ ಇದೆ ಎಂದ ಸಿಎಂ ಮುಂದಿನ ವರ್ಷ ಬೆಂಜನಪದವು ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಮನವಿಗೆ ಸ್ಪಂದಿಸಿ ಅವರು ಘೋಷಿಸಿದರು.
ನೀವು ನನ್ನನ್ನು ನೋಡಲು ಬಂದಿದ್ದೀರಾ?: “ನಾನೇನು ಸಿನಿಮಾ ನಟನಲ್ಲ. ನಾನೊಬ್ಬ ರಾಜಕಾರಣಿ. ಬಡವರು ರೈತರು, ಸಮಾಜದ ಕಟ್ಟಕಡೆಯ ಜನರ ಏಳಿಗೆಗಾಗಿ ಶ್ರಮಿಸಿದ್ದೇನೆ. ದುರ್ಬಲ ವರ್ಗದ ಜನರ ಇದ್ದಾರೆ, ಅವರಿಗೆ ಶಕ್ತಿ ತುಂಬುವ ಕೆಲಸ ಆಗಬೇಕು. ಅದಕ್ಕೋಸ್ಕರವೇ ಐದು ಗ್ಯಾರಂಟಿ ಯೋಜನೆ ಮಾಡಿದೆವು. ನಮ್ಮ ದೇಶಕ್ಕೆ ರಾಜಕೀಯ ಪ್ರಜಾಪ್ರಭುತ್ವ ದೊರಕಿದೆ. ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವ ಬೇಕು. ಅವಕಾಶ ವಂಚಿತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಾ ಇದ್ದೇವೆ. ಜನರು ನಮ್ಮ ಕೈ ಹಿಡಿಯುತ್ತಾರೆ” ಎಂದು ಭರವಸೆ ವ್ಯಕ್ತಪಡಿಸಿದರು.ಬೆಂಜನಪದವು ಕ್ರೀಡಾಂಗಣಕ್ಕೆ ಮರುಜೀವ ನೀಡಿ-ರೈ ಮನವಿ: “ಬೆಂಜನಪದವಿನಲ್ಲಿ ಹತ್ತು ಕೋಟಿ ರೂ. ಮಂಜೂರಾಗಿತ್ತು. ಅದನ್ನು ಅನುಷ್ಠಾನ ಮಾಡಲು ಸಾಧ್ಯವಾಗಿಲ್ಲ. ಮತ್ತೊಮ್ಮೆ ಕ್ರೀಡಾಂಗಣ ನಿರ್ಮಾಣಕ್ಕೆ ನನಗೆ ಅವಕಾಶವನ್ನು ಮಾಡಿಕೊಡಬೇಕು” ಎಂದು ಪ್ರಾಸ್ರಾವಿಕವಾಗಿ ಮಾತನಾಡಿದ ಮಾಜಿ ಸಚಿವ, ಕಂಬಳ ಸಮಿತಿ ಗೌರವಾಧ್ಯಕ್ಷ ರಮಾನಾಥ ರೈ ಮನವಿ ಮಾಡಿದರು.
