ಉದಯವಾಹಿನಿ, ಚಾಮರಾಜನಗರ: ಪಾಲ್ಗುಣ ಮಾಸ ಬಂತೆಂದರೆ ಗ್ರಾಮೀಣ ಭಾಗದಲ್ಲಿ ಮಾರಿಹಬ್ಬಗಳ ಸಡಗರ, ಸಂಭ್ರಮ. ಕೆಲವೆಡೆ ಕೋಳಿ, ಕುರಿಗಳನ್ನು ಬಲಿ ಕೊಟ್ಟರೆ ಹಲವೆಡೆ ತಂಬಿಟ್ಟು, ಹೋಳಿಗೆಯನ್ನು ಮಾಡಿ ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸುತ್ತಾರೆ. ಆದರೆ, ಈ ಗ್ರಾಮದಲ್ಲಿ ಕುರಿಗಳ ರಕ್ತವನ್ನು ಹೀರುವ ವಿಚಿತ್ರ ಆಚರಣೆ ನಡೆದುಕೊಂಡು ಬಂದಿದೆ.ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ದೊಡ್ಡಮ್ಮ ತಾಯಿ ಹಬ್ಬ ನಡೆಸಲಾಗಿದ್ದು, ಈ ವೇಳೆ ಹರಕೆಯ ಕುರಿಗಳ ಕುತ್ತಿಗೆಯಿಂದ ಬಾಯಲ್ಲಿ ರಕ್ತ ಹೀರಿ ದೇವರನ್ನು ಸಂಪ್ರೀತಗೊಳಿಸಿದ ವಿಲಕ್ಷಣ ಘಟನೆ ನಡೆದಿದೆ.
ಪ್ರತಿ ಪಾಲ್ಗುಣ ಮಾಸದಲ್ಲಿ ನಡೆಯುವ ಗ್ರಾಮದ ದೊಡ್ಡಮ್ಮ ತಾಯಿ ಜಾತ್ರೆಯಲ್ಲಿ ಕುರಿ ರಕ್ತ ಹೀರುವ ಸಂಪ್ರದಾಯ ನಡೆದಿದೆ. ಅರ್ಚಕ ಮಾದಶೆಟ್ಟಿ ಎಂಬವರು ಕುರಿ ರಕ್ತ ಹೀರುವ ವಿಡಿಯೋ ಭಕ್ತರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ‌.

ದೊಡ್ಡಮ್ಮ ತಾಯಿ ರಥದಲ್ಲಿ ನಿಂತಿರುವ ಅರ್ಚಕನಿಗೆ ಅಲ್ಲೇ ಬಲಿಕೊಟ್ಟ ಕುರಿಯನ್ನು ನೀಡಿದಾಗ ಹಲ್ಲಿನಿಂದ ಕಚ್ಚಿ ರಕ್ತ ಹೀರಿದರೆ ದೇವರನ್ನು ಸಂತೃಪ್ತಿಗೊಳಿಸಿದ ಹಾಗೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಹರಕೆ ಹೊತ್ತ ಭಕ್ತರು ಜಾತ್ರೆ ವೇಳೆ ಪ್ರಾಣಿಗಳನ್ನು ಬಲಿ ಕೊಡುವಾಗ ಅರ್ಚಕ ಪ್ರತಿ ಪ್ರಾಣಿಯನ್ನು ತನ್ನ ಹಲ್ಲಿನಿಂದ ಕಚ್ಚಿ ರಕ್ತ ಹೀರಿ ಕುಡಿಯುವುದು ತಲೆತಲಾಂತಗಳಿಂದ ನಡೆದುಕೊಂಡು ಬಂದಿದೆ. ಸಂಬಂಧಿಕರನ್ನು ಕರೆಸಿ ಬಲಿಕೊಟ್ಟ ಕುರಿಯಿಂದ ಖಾದ್ಯ ತಯಾರಿಸಿ ಉಣ ಬಡಿಸುತ್ತೇವೆ ಎಂದು ಅಣ್ಣೂರುಕೇರಿ ಭಕ್ತರೊಬ್ಬರು ತಿಳಿಸಿದ್ದಾರೆ. ಒಟ್ಟಿನಲ್ಲಿ ಗ್ರಾಮಾಂತರ ಭಾಗದಲ್ಲಿ ಮಾರಿಹಬ್ಬಗಳೆಂದರೆ ಒಂದೊಂದು ವಿಶೇಷವಾಗಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಚಾಮರಾಜನಗರ ತಾಲೂಕಿನ ಗೂಳಿಪುರ ಗ್ರಾಮದಲ್ಲಿ ಮುಳ್ಳಿನ ಪೊದೆಗೆ ಹಾರಿ ಗ್ರಾಮದೇವತೆ ಹಬ್ಬ ಆಚರಣೆ ನಡೆಸಿದ್ದರು. ಮುಳ್ಳಿನ ಪೊದೆಗೆ ಹಾರಿದರೂ ಸಹ ಯಾರಿಗೂ ಏನು ಆಗೋದಿಲ್ಲ, ಈ‌ ರೀತಿ ಹಬ್ಬ ಆಚರಣೆ ಮಾಡಿದರೆ ದೇವತೆಗಳು ಸಂತೃಪ್ತರಾಗಲಿದ್ದಾರೆ ಎಂಬುದು ಭಕ್ತರ ನಂಬಿಕೆ. ಅದೇ ರೀತಿ, ಅಣ್ಣೂರುಕೇರಿಯಲ್ಲೂ ಕುರಿಗಳ ರಕ್ತವನ್ನು ಹೀರಿ ವಿಚಿತ್ರ ಆಚರಣೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!