ಉದಯವಾಹಿನಿ, ನವದೆಹಲಿ: ದೀರ್ಘಕಾಲದಿಂದಲೂ ದೇಶದ ಗಡಿ ಕಾಯುವ ಹಾಗು ಸಶಸ್ತ್ರ ಪಡೆಗಳಲ್ಲಿ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಯುದ್ಧಗಳಲ್ಲಿಯೂ ಭಾಗವಹಿಸುವ ವನಿತೆಯರು ಆಗಾಗ್ಗೆ ಸೇನಾಪಡೆಗಳನ್ನೂ ಯಶಸ್ವಿಯಾಗಿ ಮುನ್ನಡೆಸುವ ಮೂಲಕ ಶೌರ್ಯ ತೋರಿದ್ದಾರೆ. ಇಂದಿನ ಅಂತಾರಾಷ್ಟ್ರೀಯ ಮಹಿಳಾ ದಿನದಂದು, 2025ರ ವಿಶ್ವಸಂಸ್ಥೆಯ (UN) ಪ್ರಧಾನ ಕಾರ್ಯದರ್ಶಿ ಪ್ರಶಸ್ತಿಗೆ ಪಾತ್ರರಾಗಿರುವ ಭಾರತೀಯ ಸೇನಾಧಿಕಾರಿ, ಬೆಂಗಳೂರಿನರಾದ ಮೇಜರ್ ಸ್ವಾತಿ ಶಾಂತಕುಮಾರ್ ಅವರ ಕುರಿತಾದ ವರದಿ ಇಲ್ಲಿದೆ.ಮೇಜರ್ ಸ್ವಾತಿ ಶಾಂತಕುಮಾರ್ ಅವರು ದಕ್ಷಿಣ ಸುಡಾನ್‌ನಲ್ಲಿ ನಡೆಯುತ್ತಿರುವ ‘ಸಮಾನ ಪಾಲುದಾರರು, ಶಾಶ್ವತ ಶಾಂತಿ’ ಮಿಷನ್​ ಯಶಸ್ಸಿಗಾಗಿ ಈ ಅತ್ಯುನ್ನದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜನವರಿ 2026ರಲ್ಲಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸುಡಾನ್‌ನಲ್ಲಿ ಲಿಂಗ-ಪ್ರತಿಕ್ರಿಯಾಶೀಲ ಶಾಂತಿಪಾಲನೆಗೆ ಉತ್ತೇಜನ ಮತ್ತು ಸ್ಥಳೀಯ ಸಮುದಾಯಗಳೊಂದಿಗೆ ಸಂಬಂಧ ಬಲಪಡಿಸಲು ಕೈಗೊಂಡ ಪ್ರಯತ್ನಗಳಿಗಾಗಿ ಈ ಗೌರವ ಲಭಿಸಿದೆ.
IANS ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಮೇಜರ್ ಸ್ವಾತಿ, ಈ ಗೌರವವು ದಕ್ಷಿಣ ಸುಡಾನ್‌ನಲ್ಲಿ ನಿಯೋಜನೆಗೊಂಡ ಭಾರತೀಯ ಮಹಿಳಾ ಶಾಂತಿಪಾಲಕರ ತಂಡದ ಸಾಮೂಹಿಕ ಪ್ರಯತ್ನದ ಪ್ರತಿಬಿಂಬಿ. ದಕ್ಷಿಣ ಸುಡಾನ್‌ನಲ್ಲಿ ವಿಶ್ವಸಂಸ್ಥೆಯ ಕಾರ್ಯಾಚರಣೆಯಲ್ಲಿ ಮೊದಲ ಬಾರಿಗೆ ಭಾಗವಹಿಸಿರುವ ಭಾರತದ 20 ಮಹಿಳಾ ಸೈನಿಕರಿರುವ ನನ್ನ ತಂಡದ ಕಾರ್ಯಕ್ಕೆ ಸಿಕ್ಕ ಗೌರವ. ಈ ಮನ್ನಣೆಯು ನಮ್ಮ ಕೆಲಸ, ನಮ್ಮ ಬೆಟಾಲಿಯನ್, ದೆಹಲಿಯಲ್ಲಿರುವ ಸೇನಾ ಪ್ರಧಾನ ಕಚೇರಿ ಮತ್ತು ಭಾರತೀಯ ಸೇನೆಯಿಂದ ನಾವು ಪಡೆದ ಮಾರ್ಗದರ್ಶನದ ಫಲ ಎಂದು ತಿಳಿಸಿದ್ದಾರೆ.

ವಿಶ್ವಸಂಸ್ಥೆ ಮಿಷನ್‌ನಲ್ಲಿ ಮೇಜರ್ ಸ್ವಾತಿ ಶಾಂತಕುಮಾರ್: ಮೇಜರ್ ಸ್ವಾತಿ ಶಾಂತಕುಮಾರ್ ಬೆಂಗಳೂರಿನವರಾಗಿದ್ದು, ಸಶಸ್ತ್ರ ಪಡೆಗಳಿಗೆ ಸೇರುವ ಮುನ್ನ ನ್ಯೂ ಹಾರಿಜಾನ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ. ಪ್ರಸ್ತುತ ದಕ್ಷಿಣ ಸುಡಾನ್‌ನಲ್ಲಿನ ವಿಶ್ವಸಂಸ್ಥೆಯ ಮಿಷನ್‌ನಲ್ಲಿ (UNMISS) ಭಾರತದ ಶಾಂತಿಪಾಲನಾ ತುಕಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

20 ಭಾರತೀಯ ಮಹಿಳಾ ಸೈನಿಕರ ತಂಡದೊಂದಿಗೆ ಅವರನ್ನು ಈ ಮಿಷನ್​​ಗಾಗಿ ನಿಯೋಜಿಸಲಾಗಿದೆ. ಅಲ್ಲಿನ ನಾಗರಿಕರ ರಕ್ಷಣೆ ಮತ್ತು ಸಂಘರ್ಷ ಪೀಡಿತ ಪ್ರದೇಶದಲ್ಲಿ ಶಾಂತಿ ಮೂಸಿಸುವ ಕಾರ್ಯಾಚರಣೆಯ ಯೋಜನೆ ಮತ್ತು ಗಸ್ತು ಕಾರ್ಯದಲ್ಲಿ ಈ ತಂಡ ತೊಡಗಿಸಿಕೊಂಡಿದೆ. ‘ಸಮಾನ ಪಾಲುದಾರರು, ಶಾಶ್ವತ ಶಾಂತಿ’ ಎಂಬ ಕಾರ್ಯಾಚರಣೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸುವುದು ಮತ್ತು ಸ್ಥಳೀಯ ಸಮುದಾಯಗಳೊಂದಿಗೆ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುವುದು ಇದರ ಪ್ರಮುಖ ಉದ್ದೇಶ. ವಿಶ್ವಸಂಸ್ಥೆಯ ಪ್ರಕಾರ, ಶಾಂತಿಪಾಲನಾ ಕಾರ್ಯಾಚರಣೆಗಳ ಸಮಯದಲ್ಲಿ ಸಮುದಾಯಗಳೊಂದಿಗೆ ಸಂವಹನ ನಡೆಸುವ ಮತ್ತು ವಿಶ್ವಾಸ ಬೆಳೆಸುವಲ್ಲಿ ಮಹಿಳಾ ಶಾಂತಿಪಾಲಕರು ಪ್ರಮುಖ ಪಾತ್ರ ವಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!