ಉದಯವಾಹಿನಿ, ಮೈಲವರಂ(ಆಂಧ್ರ ಪ್ರದೇಶ): ಇಲ್ಲಿನ ಎನ್‌ಟಿಆರ್ ಜಿಲ್ಲೆಯ ಮೈಲವರಂನಲ್ಲಿ ಮದುವೆ ಮನೆಯಲ್ಲಿ ಹೈಡ್ರಾಮಾ ನಡೆದಿದ್ದು, ನೆರೆದಿದ್ದ ಅತಿಥಿಗಳು, ಸಂಬಂಧಿಕರು ಹಾಗೂ ಜನರು ಆಘಾತಗೊಂಡರು. ವಿವಾಹಕ್ಕೆ ಕೆಲವೇ ಕ್ಷಣಗಳ ಮುನ್ನ ವಧು ವೇದಿಕೆಯಿಂದ ಹೊರನಡೆದಿದ್ದು, ಸಮಾರಂಭ ಏಕಾಏಕಿ ರದ್ದಾಗಿದೆ.ಸ್ಥಳೀಯರ ಪ್ರಕಾರ, ಶುಕ್ರವಾರ ರಾತ್ರಿ ವರನ ಮನೆಯಲ್ಲಿ ವಿವಾಹ ಸಂಭ್ರಮ ಜೋರಾಗಿತ್ತು. ಮದುವೆ ಮನೆ ಸಂಬಂಧಿಕರು, ಗ್ರಾಮಸ್ಥರು ಮತ್ತು ಅತಿಥಿಗಳಿಂದ ತುಂಬಿ ತುಳುಕುತ್ತಿತ್ತು. ಸಾಂಪ್ರದಾಯಿಕ ಸಂಗೀತ ವಾದ್ಯಗಳ ಸದ್ದಿನೊಂದಿಗೆ ಶುಭ ಮುಹೂರ್ತದಲ್ಲಿ ಸಾಂಪ್ರದಾಯಿಕ ಜೀರಿಗೆ-ಬೆಲ್ಲ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ವಧು ಮತ್ತು ವರನ ತಲೆಯ ಮೇಲೆ ಜೀರಿಗೆ ಮತ್ತು ಬೆಲ್ಲವನ್ನು ಇಡಲಾಗುತ್ತದೆ. ಇದು ಪವಿತ್ರ ಬಂಧನಕ್ಕೂ ಮುನ್ನ ನಡೆಯುವ ಏಕತಾ ಸಂಕೇತ ಸೂಚಕ ಸಂಪ್ರದಾಯವಾಗಿದೆ.
ಸಮಾರಂಭ ಮುಂದುವರೆಯುತ್ತಿದ್ದಂತೆ ಸಿನಿಮೀಯ ರೀತಿಯಲ್ಲಿ ಯುವಕನೋರ್ವ ಮದುವೆ ಮಂಟಪದ ಮುಂದೆ ದಿಢೀರ್ ಪ್ರತ್ಯಕ್ಷನಾಗಿದ್ದಾನೆ. ಆತನನ್ನು ಕಂಡಾಕ್ಷಣ ವಧು ವೇದಿಕೆಯಿಂದ ಎದ್ದು, ಮಂಟಪದಿಂದ ಕೆಳಗಿಳಿದು ನೇರವಾಗಿ ಯುವಕನ ಪಕ್ಕ ಬಂದು ನಿಂತಿದ್ದಾಳೆ. ವರನನ್ನು ವಿವಾಹವಾಗಲು ವಧು ನಿರಾಕರಿಸಿದಳು. ಯಾರೂ ಊಹಿಸದ ಈ ಸನ್ನಿವೇಶ ಕಂಡು ನೆರೆದಿದ್ದ ಜನರೆಲ್ಲರೂ ದಿಗ್ಭ್ರಮೆಗೊಂಡರು.
ಅನಿರೀಕ್ಷಿತ ಬೆಳವಣಿಗೆಯಿಂದ ವರ ಮತ್ತು ಕುಟುಂಬ ಸದಸ್ಯರು ಆಘಾತಕ್ಕೊಳಗಾದರು. ಮದುವೆಗೆ ಸೇರಿದ್ದ ಸಂಬಂಧಿಕರು ಮತ್ತು ಗ್ರಾಮಸ್ಥರು ಗೊಂದಲಕ್ಕೊಳಗಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿತು. ಆಗ ವಧುವನ್ನು ಪ್ರಶ್ನಿಸಿದಾಗ, ಯುವಕ ತನ್ನದೇ ಗ್ರಾಮದವನಾಗಿದ್ದು, ಕೆಲ ಸಮಯದಿಂದ ಪರಸ್ಪರ ಪ್ರೀತಿಸುತ್ತಿರುವ ವಿಚಾರ ಬಹಿರಂಗಪಡಿಸಿದಳೆಂದು ವರದಿಯಾಗಿದೆ. ನಾನು ಈ ವಿವಾಹ ಮಾಡಿಕೊಳ್ಳುವುದಿಲ್ಲ. ಬದಲಿಗೆ ನನ್ನ ಗೆಳೆಯನನ್ನೇ ಮದುವೆಯಾಗುತ್ತೇನೆ ಎಂದು ಕುಟುಂಬಸ್ಥರಿಗೆ ಸ್ಪಷ್ಟವಾಗಿ ತಿಳಿಸಿದ್ದಾಳೆ. ದಿಢೀರ್ ಘಟನೆಯಿಂದ ಆಕ್ರೋಶಗೊಂಡ ವರನ ಸಂಬಂಧಿಕರಲ್ಲಿ ಕೆಲವರು ಯುವಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ಕೊನೆ ಕ್ಷಣದಲ್ಲಿ ಮದುವೆಗೆ ಅಡ್ಡಿಪಡಿಸಿದ್ದಕ್ಕೆ ಯುವಕನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಎರಡೂ ಕಡೆಯವರನ್ನು ಸಮಾಧಾನಪಡಿಸಿದ್ದಾರೆ.
