ಉದಯವಾಹಿನಿ, ನವದೆಹಲಿ: ಬಜೆಟ್ ಅಧಿವೇಶನದ ಎರಡನೇ ಹಂತದ ಕಾರ್ಯ ಕಲಾಪಗಳು ಪ್ರಾರಂಭಗೊಂಡಿದ್ದು, ಮೊದಲ ದಿನ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷ ಮತ್ತು ಅದರಿಂದ ಭಾರತದ ಇಂಧನ ಭದ್ರತೆಯ ಮೇಲೆ ಉಂಟಾಗುತ್ತಿರುವ ಪರಿಣಾಮಗಳ’ ಕುರಿತು ಪ್ರಸ್ತಾಪಿಸಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಅಡ್ಡಿಪಡಿಸಿದ್ದರಿಂದ ಸದನದಲ್ಲಿ ಗದ್ದಲ ಉಂಟಾಯಿತು.
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷ ಮತ್ತು ಅದರಿಂದ ಭಾರತದ ಇಂಧನ ಭದ್ರತೆಯ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಕುರಿತು ನಿಯಮ 176ರ ಅಡಿಯಲ್ಲಿ ‘ಅಲ್ಪಾವಧಿ ಚರ್ಚೆ’ಗೆ ಅವಕಾಶ ಕೋರಿ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ಅಧ್ಯಕ್ಷರಿಗೆ ನೋಟಿಸ್ ನೀಡಿದ್ದರು. ಪಶ್ಚಿಮ ಏಷ್ಯಾದಲ್ಲಿನ ಅಸ್ಥಿರತೆಯಿಂದಾಗಿ ಭಾರತಕ್ಕೆ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಭಾರತವು ತನ್ನ ಒಟ್ಟು ಕಚ್ಚಾ ತೈಲದ ಸುಮಾರು 55%ರಷ್ಟನ್ನು ಈ ಪ್ರದೇಶದಿಂದಲೇ ಆಮದು ಮಾಡಿಕೊಳ್ಳುತ್ತಿದೆ ಎಂದು ಖರ್ಗೆ ತಮ್ಮ ನೋಟಿಸ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯ ನಾಗರಿಕರ ಸುರಕ್ಷತೆಯ ಬಗ್ಗೆಯೂ ಚರ್ಚೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದರು.
