ಉದಯವಾಹಿನಿ, ಚೈಬಾಸಾ(ಜಾರ್ಖಂಡ್​): ಇಲ್ಲಿನ ಪಶ್ಚಿಮ ಸಿಂಗ್ಭೂಮ್​ ಜಿಲ್ಲೆಯ ಚಕ್ರಧರಪುರ ಉಪವಿಭಾಗ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಆಸ್ಪತ್ರೆಯಿಂದ ಯಾವುದೇ ಸಹಾಯ ಸಿಗಲಿಲ್ಲ ಎಂದು ಹೇಳಿರುವ ಬಡ ತಂದೆಯೊಬ್ಬರು ತನ್ನ ನವಜಾತ ಶಿಶುವಿನ ಶವವನ್ನು ರಟ್ಟಿನ ಪೆಟ್ಟಿಗೆಯೊಳಗಿಟ್ಟು ಹಳ್ಳಿಗೆ ತಂದಿದ್ದಾರೆ.

ಸರೈಕೇಲಾ ಪೊಲೀಸ್​ ಠಾಣಾ ಪ್ರದೇಶದ ಬಂಗಾರಸಾಯಿ ಗ್ರಾಮದ ನಿವಾಸಿ ರಾಮಕೃಷ್ಣ ಹೆಂಬ್ರಾಮ್​ ಎಂಬವರು ಕೆಲವು ದಿನಗಳ ಹಿಂದೆ ಚಕ್ರಧರಪುರ ಉಪವಿಭಾಗೀಯ ಆಸ್ಪತ್ರೆಗೆ ತನ್ನ ಗರ್ಭಿಣಿ ಪತ್ನಿ ರೀತಾ ತಿರಿಯಾ ಅವರನ್ನು ದಾಖಲಿಸಿದ್ದರು. ನವಜಾತ ಶಿಶು ಜನನದ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿದೆ. ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರೂ ಆಸ್ಪತ್ರೆಯವರು ಸರಿಯಾದ ಆರೈಕೆ ಮಾಡಲಿಲ್ಲ. ಶಿಶುವಿನ ಮರಣಾ ನಂತರ ಆಸ್ಪತ್ರೆಯ ಆಡಳಿತ ಮಂಡಳಿ ಕುಟುಂಬಕ್ಕೆ ಯಾವುದೇ ಸಹಾಯವನ್ನೂ ನೀಡಲಿಲ್ಲ. ಇದರ ಬದಲು ಸಾಧ್ಯವಾದಷ್ಟು ಬೇಗ ಶವವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗುವಂತೆ ಒತ್ತಾಯಿಸಿದರು ಎಂದು ತಿಳಿಸಿದ್ದಾರೆ.

ಕನಿಷ್ಠ ಪಕ್ಷ ಮಗುವಿನ ಶವವನ್ನು ಗ್ರಾಮಕ್ಕೆ ಸಾಗಿಸಲು ಆಂಬ್ಯುಲೆನ್ಸ್ ಅಥವಾ ಇತರ ವಾಹನದ ವ್ಯವಸ್ಥೆ ಮಾಡಿಕೊಡುವಂತೆ ಅಸಹಾಯಕ ತಂದೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೂ ಆಸ್ಪತ್ರೆ ಸಿಬ್ಬಂದಿ ಕಿವಿಗೊಡಲಿಲ್ಲ. ಬಳಿಕ ತಮ್ಮ ಶಿಶುವಿನ ಶವವನ್ನು ಹತ್ತಿರದಲ್ಲಿದ್ದ ಖಾಲಿ ರಟ್ಟಿನ ಪೆಟ್ಟಿಗೆಯೊಳಗಿಟ್ಟೇ ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಈ ಘಟನೆಯನ್ನು ನೋಡಿದ ಗ್ರಾಮಸ್ಥರು ಕಣ್ಣೀರು ಹಾಕಿದರು. ಆಸ್ಪತ್ರೆ ಸಿಬ್ಬಂದಿ ಮಾನವೀಯ ನೆಲೆಯಲ್ಲಿ ಶವವನ್ನು ಗೌರವಯುತವಾಗಿ ಮನೆಗೆ ಸಾಗಿಸಲು ವ್ಯವಸ್ಥೆ ಮಾಡಬಹುದಿತ್ತು ಎಂದು ಆಕ್ರೋಶ ಹೊರಹಾಕಿದರು. ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕುಟುಂಬಕ್ಕೆ ಆರ್ಥಿಕ ಸಹಾಯವನ್ನೂ ಅವರು ಕೋರಿದ್ದಾರೆ.

ಆಸ್ಪತ್ರೆಯ ವೈದ್ಯಕೀಯ ಉಸ್ತುವಾರಿ ಡಾ.ಅಂಶುಮಾನ್ ಶರ್ಮಾ ಅವರು ಪ್ರತಿಕ್ರಿಯಿಸಿ, “ಅವರು ಶವ ಸಾಗಿಸಲು ಆಸ್ಪತ್ರೆಯಿಂದ ಯಾವುದೇ ಸಹಾಯ ಕೇಳಲಿಲ್ಲ. ಆಸ್ಪತ್ರೆಗೆ ತಿಳಿಸಿದ್ದರೆ ಮಮತಾ ವಾಹನದ ಮೂಲಕ ಶವವನ್ನು ಮನೆಗೆ ಕಳುಹಿಸಲು ವ್ಯವಸ್ಥೆ ಮಾಡಬಹುದಿತ್ತು. ಆಸ್ಪತ್ರೆ ಆಡಳಿತ ರೋಗಿಗಳಿಗೆ ಸಾಧ್ಯವಿರುವ ಎಲ್ಲ ಸೌಕರ್ಯಗಳನ್ನು ಒದಗಿಸಲು ಶ್ರಮಿಸುತ್ತದೆ. ಭವಿಷ್ಯದಲ್ಲಿ ಅಂತಹ ಸಂದರ್ಭಗಳು ಉದ್ಭವಿಸದಂತೆ ನೋಡಿಕೊಳ್ಳಲು ವಿಶೇಷ ಗಮನ ಹರಿಸಲಾಗುತ್ತದೆ” ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!