ಉದಯವಾಹಿನಿ, ಪುಲಿವೆಂದುಲ (ಆಂಧ್ರ ಪ್ರದೇಶ): ಮಗನ ಆರೋಗ್ಯದ ಕಾಳಜಿಗಾಗಿ ತಾಯಿ ನಡೆಸಿದ ಹೋರಾಟ ಇದೀಗ ಅವರನ್ನು ಉದ್ಯಮಿಯಾಗಿ ರೂಪಿಸಿದೆ. ಸಿರಿಧಾನ್ಯಗಳ ಶಕ್ತಿ ಅರಿತ ಅವರು ಇಂದು ಅದರ ಆಧಾರಿತ ಆಹಾರ ತಯಾರಿಕೆ ಮೂಲಕ ಉದ್ಯಮ ಕಟ್ಟಿದ್ದು, ಅನೇಕ ಸ್ಥಳೀಯ ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ.
ವೆಲಿಧಂಡ್ಲ ಮೂಲದ ಕರ್ಣ ಪ್ರಮೀಳಾ ಅವರೇ ಈ ಉದ್ಯಮಿ. ಒಂದು ಕಾಲದಲ್ಲಿ ಹೈದರಾಬಾದ್‌ನ ಪ್ರಮುಖ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ ಪ್ರಮೀಳಾ ನಲ್ಲಪುರರೆಡ್ಡಿಪಲ್ಲೆಯ ವರದಾ ಪ್ರಕಾಶ್ ಅವರನ್ನು ಮದುವೆಯಾಗಿ ಪುಲಿವೆಂದುಲದಲ್ಲಿ ನೆಲೆ ನಿಂತರು. ಎರಡು ಗಂಡು ಮಕ್ಕಳ ತಾಯಿಯಾಗಿ ಸುಂದರ ಜೀವನ ಸಾಗಿಸುತ್ತಿದ್ದರು.
ತಮ್ಮ ನಾಲ್ಕು ವರ್ಷದ ಮಗ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದ. ಇದರಿಂದ ವೈದ್ಯರು ಆತನಿಗೆ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ತಿಳಿಸಿ, ಜಂಕ್ ಫುಡ್ಗಳನ್ನು ನೀಡದಂತೆ ಸಲಹೆ ನೀಡಿದ್ದರು. ಈ ಸಮಯದಲ್ಲಿ ಪ್ರಮೀಳಾ ಕೀಟನಾಶಕಗಳ ಬಳಕೆಯ ಆಹಾರ ಮತ್ತು ಅನಾರೋಗ್ಯಕರ ಪದಾರ್ಥಗಳ ಹೊರತಾದ ಆಹಾರವನ್ನು ಹುಡುಕಾಡ ತೊಡಗಿದರು. ಇದಕ್ಕಾಗಿ ಅವರು ಮನೆಯಲ್ಲಿ ಸಣ್ಣ ಧಾನ್ಯಗಳು ಮತ್ತು ಸಿರಿಧಾನ್ಯಗಳನ್ನು ಬಳಸಿ ಪೌಷ್ಟಿಕ ಆಹಾರವನ್ನು ತಯಾರಿಸಲು ಪ್ರಾರಂಭಿಸಿದರು.
ಅವರ ಈ ಪ್ರಯತ್ನ ನಿಧಾನವಾಗಿ ಯಶಸ್ಸು ನೀಡಲಾರಂಭಿಸಿತು. ಮನೆಯಲ್ಲಿ ನಿರ್ಮಿಸಿದ ಈ ಪೌಷ್ಟಿಕ ಆಹಾರದಿಂದ ಮಗನ ಆರೋಗ್ಯ ಸುಧಾರಣೆಯಾಯಿತು. ಈ ಬದಲಾವಣೆಯಿಂದ ಉತ್ಸಾಹಗೊಂಡ ಅವರು, ಈ ಆಹಾರದ ಕುರಿತು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಗೆ ತಿಳಿಸಿ, ಅವುಗಳ ಆಹಾರದ ಗುಣಮಟ್ಟ ಮತ್ತು ರುಚಿ ಪರೀಕ್ಷೆಗೆ ಒತ್ತಾಯಿಸಿದರು. ಇದಕ್ಕೆ ಅವರಿಂದಲೂ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಯಿತು.
ಈ ವೇಳೆ, ಈ ರೀತಿಯ ಸಮಸ್ಯೆಯನ್ನು ಅನೇಕ ತಾಯಂದಿರುವ ಅನುಭವಿಸುತ್ತಿದ್ದಾರೆ ಎಂಬುದನ್ನು ಅರಿತ ಅವರು ಒಂದು ದಿಟ್ಟ ನಿರ್ಧಾರವೊಂದನ್ನು ಕೈಗೊಂಡರು. ತಮ್ಮ ಸಾಫ್ಟ್‌ವೇರ್ ಉದ್ಯೋಗಕ್ಕೆ ಗುಡ್ಬೈ ಹೇಳಿದ ಅವರು, ಪುಲಿವೆಂದಲದಲ್ಲಿ ಸಿರಿ ಸಂಜೀವಿನಿ ಎಂಬ ಸಣ್ಣ ಉದ್ಯಮ ಆರಂಭಿಸಿದರು.
ಹೋರಾಟದಿಂದ ಯಶಸ್ಸು: ಉದ್ಯಮದ ಆರಂಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ ಪ್ರಮೀಳಾ ನಿಧಾನವಾಗಿ ಯಶಸ್ಸಿನ ರುಚಿ ಕಂಡರು. ಆರಂಭದಲ್ಲಿ ಅವರು ಸಿರಿಧಾನ್ಯಗಳಿಂದ ಮುರುಕ್ಕು, ಸಣ್ಣಕರ, ಪಪ್ಪು ಬಿಲ್ಲೆಗಳು, ಲಡ್ಡುಗಳು, ಇಡ್ಲಿ ಮಿಕ್ಸ್, ಪೊಂಗಲ್ ಮಿಕ್ಸ್, ಪೂರಿ, ದೋಸೆ ಹಿಟ್ಟು ಮತ್ತು ಅಂಬಲಿ ತಯಾರಿಸಿ ಮಾರಾಟ ಮಾಡುತ್ತಿದ್ದರು.
ಆರಂಭದಲ್ಲಿ ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗದಿದ್ದರೂ, ಇದರಿಂದ ಕುಗ್ಗದೆ ಅವುಗಳ ರುಚಿಯನ್ನು ಹೆಚ್ಚಿಸುವ ಕೆಲಸ ಮಾಡಿದರು. ಸಿರಿಧಾನ್ಯಗಳು ಆರೋಗ್ಯದ ಪ್ರಯೋಜನ ಕುರಿತು ಅವರು ಜಾಗೃತಿ ಮೂಡಿಸಲು ಮುಂದಾದರು. ನಿಧಾನವಾಗಿ ಅದು ಗ್ರಾಹಕರ ನಂಬಿಕೆಯನ್ನು ಗಳಿಸಿತು. ಇಂದು ಪ್ರತಿದಿನ 300 ಜನರು ಸಿರಿಧಾನ್ಯದ ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ಶುಭ ಕಾರ್ಯಕ್ರಮಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ನಾವು ಈ ಸಿರಿಧಾನ್ಯಗಳನ್ನು ಪೂರೈಸುತ್ತಿದ್ದೇವೆ ಅಂತಾರೆ ಪ್ರಮೀಳಾ.
