ಉದಯವಾಹಿನಿ, ಕೋಟಾ(ರಾಜಸ್ಥಾನ): ಬೈಕ್ ಚಕ್ರದಲ್ಲಿದ್ದ ಹಾವನ್ನು ಗಮನಿಸದೆೆ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಪ್ರಯಾಣದ ವೇಳೆ ಹಾವು ಕಡಿದಿದ್ದು, ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾನೆ. ಕೋಟಾದ ನಯಾಗಾಂವ್ ಎಂಬಲ್ಲಿ ಘಟನೆ ನಡೆದಿದೆ. ಹಾವು ಕಡಿತಕ್ಕೊಳಗಾದ ಯುವಕನನ್ನು ಯೋಗೀಶ್ ಎಂದು ಗುರುತಿಸಲಾಗಿದೆ.
ಯೋಗೀಶ್ ಮತ್ತು ಸ್ನೇಹಿತ ಮೋಹಿತ್ ಯಾವುದೋ ಕೆಲಸದ ನಿಮಿತ್ತ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದರು. ಮಾರ್ಗ ಮಧ್ಯೆ ಬೈಕ್ನಲ್ಲಿ ಅಡಗಿಕುಳಿತಿದ್ದ ಹಾವು ಕಚ್ಚಿದೆ. ತಕ್ಷಣವೇ ಹಿಂಬದಿ ಕುಳಿತಿದ್ದ ಸವಾರ ಮೋಹಿತ್‌ನನ್ನು ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಘಟನೆಯ ಬೆನ್ನಲ್ಲೇ ದ್ವಿಚಕ್ರ ವಾಹನದಲ್ಲಿದ್ದ ಹಾವನ್ನು ಹಿಡಿಯಲು ಉರಗ ತಜ್ಞ ಗೋವಿಂದ್ ಶರ್ಮಾ ಎಂಬವರನ್ನು ಕರೆಸಲಾಗಿದ್ದು, ಅವರು ಹಾವು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
“ಅಂದಾಜು ಎರಡಡಿ ಉದ್ದದ ಹಾವು ಬೈಕ್ ಸೀಟಿನೊಳಗೆ ಬೆಚ್ಚಗೆ ಕುಳಿತಿತ್ತು. ಇದು ಗರಗಸ ಮಂಡಲ ಹಾವು. ಮಂಡಲ ಹಾವಿನಂತೆ ವಿಷಕಾರಿ. ಮಂಡಲ ಹಾವು ಏಕಕಾಲದಲ್ಲಿ ದೊಡ್ಡ ಪ್ರಮಾಣದ ವಿಷ ಹೊರಹಾಕಿದರೆ, ಗರಗಸ ಮಂಡಲ ಹಾವು ಚಿಕ್ಕ ಹಲ್ಲು ಹೊಂದಿದ್ದು, ಅಲ್ಪ ಪ್ರಮಾಣದಲ್ಲಿ ವಿಷ ಹೊರ ಹಾಕುತ್ತದೆ” ಎಂದು ಉರಗ ತಜ್ಞ ಗೋವಿಂದ್ ಶರ್ಮಾ ಮಾಹಿತಿ ನೀಡಿದರು.
ಸೊಳ್ಳೆ ಕಚ್ಚಿತೆಂದು ಸುಮ್ಮನಾಗಿದ್ದ ಯುವಕ: ಯೋಗೇಶ್ ಸೊಂಟಕ್ಕೆ ಹಾವು ಕಚ್ಚಿದಾಗ ಸೊಳ್ಳೆ ಕಚ್ಚಿತೆಂದು ಸುಮ್ಮನಾಗಿದ್ದಾರೆ. ಆಗ ಸೊಂಟ ಕೆರೆಯಲು ಹಿಂದೆ ಕೈ ಹಾಕಿದಾಗ ಕೈಗೂ ಹಾವು ಕಚ್ಚಿದೆ. ಹಾವು ನೋಡಿದ ತಕ್ಷಣ ಅವರು ಗಾಬರಿಗೊಂಡಿದ್ದಾರೆ.
ಸದ್ಯ ಯೋಗೇಶ್ನನ್ನು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅಡುಗೆ ಕೋಣೆಯಲ್ಲಿ ಅಡಗಿದ್ದ ಹಾವು: ಇದೇ ತಿಂಗಳ ಆರಂಭದಲ್ಲಿ ಮೈಸೂರು ನಗರದ ಮನೆಯೊಂದರ ಅಡುಗೆ ಕೋಣೆಯಲ್ಲಿ ಸೇರಿಕೊಂಡಿದ್ದ ಹಾರುವ ಹಾವನ್ನು ಉರಗ ರಕ್ಷಕ ಸ್ನೇಕ್ ಶ್ಯಾಮ್ ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದರು. ವಿಜಯನಗರ ಮೊದಲನೇ ಹಂತದ ನಿವೃತ್ತ ನೌಕರ ಗಂಗಾಧರಪ್ಪ ಅವರ ಅಡುಗೆ ಮನೆಯ ದಿನಸಿ ಡಬ್ಬದ ಹಿಂಭಾಗ ಹಾವು ಕಾಣಿಸಿಕೊಂಡಿತ್ತು. ತಕ್ಷಣ ಮನೆ ಮಾಲೀಕರು ಉರಗ ರಕ್ಷಕಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಅವರು ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.
