ಉದಯವಾಹಿನಿ, ವ್ಯಾಂಕೋವರ್(ಕೆನಡಾ): ಇಲ್ಲಿನ ಶಾಲೆಯಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯ ಪೋಷಕರು ತಯಾರಕ ಓಪನ್‌ಎಐ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಶಂಕಿತ ದಾಳಿಕೋರ ಸಾಮೂಹಿಕ ಹತ್ಯೆಗೆ ಸಂಚು ರೂಪಿಸಿದ್ದ ಎಂಬುದು ಚಾಟ್‌ಜಿಪಿಟಿಗೆ ತಿಳಿದಿತ್ತು. ಆದರೆ, ಪೊಲೀಸರಿಗೆ ಎಚ್ಚರಿಕೆ ನೀಡಿಲ್ಲ. ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಫೆಬ್ರವರಿ 10ರಂದು ಟಂಬ್ಲರ್ರಿಡ್ಜ್ ಎಂಬಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹನ್ನೆರಡು ವರ್ಷದ ಮಾಯಾ ಗೆಬಾಲಾ ಎಂಬ ವಿದ್ಯಾರ್ಥಿನಿಯ ತಲೆಗೆ ಗುಂಡೇಟು ತಗುಲಿ ಗಂಭೀರ ಗಾಯಗೊಂಡಿದ್ದಾಳೆ. ಆಕೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯ ಪೋಷಕರು ಓಪನ್‌ಎಐ ವಿರುದ್ಧ ದೂರು ದಾಖಲಿಸಿದ್ದಾರೆ.
ದಾಳಿ ನಡೆಸಿ 8 ಜನರನ್ನು ಸಾಮೂಹಿಕ ಹತ್ಯೆ ಮಾಡಿದ ಹಂತಕ ಜೆಸ್ಸಿ ವ್ಯಾನ್ ರೂಸ್ಟ್‌ಸೆಲಾರ್ ಚಾಟ್ಜಿಪಿಟಿಯಲ್ಲಿ ಗುಂಡಿನ ದಾಳಿ ಬಗ್ಗೆ ಪರಿಶೀಲಿಸಿದ್ದಾನೆ. ಇದರಿಂದಾಗಿ ಆತನ ಖಾತೆಯನ್ನು ನಿರ್ಬಂಧಿಸಲಾಗಿತ್ತು. ಇಂತಹ ಆಘಾತಕಾರಿ ಮಾಹಿತಿ ಕೋರಿದ ದಾಳಿಕೋರನ ಬಗ್ಗೆ ಮಾಹಿತಿ ಇದ್ದರೂ ಕಂಪನಿ ಪೊಲೀಸರಿಗೆ ಏಕೆ ಮಾಹಿತಿ ನೀಡಿಲ್ಲ ಎಂದು ಅವರು ದೂರಿನಲ್ಲಿ ಪ್ರಶ್ನಿಸಿದ್ದಾರೆ.
2025ರಲ್ಲಿ ದಾಳಿ ನಡೆಸಿದ ಆರೋಪಿಯ ಮೊದಲ ಖಾತೆಯನ್ನು ನಿರ್ಬಂಧಿಸಲಾಗಿದೆ. ಆದರೆ, ಎರಡನೇ ಖಾತೆಯನ್ನು ಆತ ಹೊಂದಿದ್ದಾನೆ. ಇದರ ಮೂಲಕ ಆತ ಗುಂಡಿನ ದಾಳಿಯ ಬಗ್ಗೆ ಯೋಜಿಸಿದ್ದಾನೆ. ಗುಂಡಿನ ದಾಳಿ ನಡೆಸಲು ಆತ ಓಪನ್‌ಎಐನ ಚಾಟ್‌ಬಾಟ್ ಆದ ಚಾಟ್‌ಜಿಪಿಟಿಯನ್ನು ಬಳಸಿಕೊಂಡಿದ್ದಾನೆ. ಗುಂಡಿನ ದಾಳಿ ಮಾಡುವ ವಿಧಾನಗಳನ್ನು ಈ ಚಾಟ್ಜಿಪಿಟಿ ಮಾಹಿತಿ ನೀಡುತ್ತಿರುವುದು ಆಘಾತಕಾರಿ ಎಂದು ದೂರಿನಲ್ಲಿ ವಿದ್ಯಾರ್ಥಿನಿಯ ಕುಟುಂಬ ಉಲ್ಲೇಖಿಸಿದೆ. ಕೆನಡಾದಲ್ಲಿ ಆಗಾಗ್ಗೆ ಗುಂಡಿನ ದಾಳಿ ನಡೆಯುತ್ತಿರುತ್ತದೆ. ಚಾಟ್ಜಿಪಿಟಿಯಲ್ಲಿ ದಾಳಿ ಹೇಗೆ ನಡೆಸಬೇಕು ಎಂದು ಹುಡುಕಾಡಿದಾಗ, ಅದನ್ನು ಅರಿತ ಕಂಪನಿಯು ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ಸಂಭಾವ್ಯ ದಾಳಿಯನ್ನು ಈ ಮೂಲಕ ತಡೆಯಬಹುದಿತ್ತು. ಆದರೆ, ಕಂಪನಿ ಇದರಲ್ಲಿ ನಿರ್ಲಕ್ಷ್ಯ ತೋರಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
