ಉದಯವಾಹಿನಿ, ಮಾಸ್ಕೋ,ರಷ್ಯಾ: ಇರಾನ್ ಮೇಲೆ ಅಮೆರಿಕ – ಇಸ್ರೇಲ್ ದಾಳಿಯಿಂದ ಉಂಟಾದ ಜಾಗತಿಕ ಇಂಧನ ಅಡಚಣೆಯ ನಡುವೆ ಸೋಮವಾರ ತಡರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ರಷ್ಯಾದ ಪ್ರೆಸಿಡೆಂಟ್ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ಕ್ರೆಮ್ಲಿನ್ ವಿದೇಶಾಂಗ ನೀತಿ ಸಹಾಯಕ ಯೂರಿ ಉಷಕೋವ್ ಅವರು ನೀಡಿರುವ ಮಾಹಿತಿ ಪ್ರಕಾರ, ಇಬ್ಬರು ನಾಯಕರು ಒಂದು ಗಂಟೆಯ ದೂರವಾಣಿ ಸಂಭಾಷಣೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವಣ ಉದ್ವಿಗ್ನತೆ ಹಾಗೂ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು.
ಈ ದೂರವಾಣಿ ಮಾತುಕತೆ ಇರಾನ್ ಸಂಘರ್ಷ ಮತ್ತು ಮಾಸ್ಕೋ, ವಾಷಿಂಗ್ಟನ್ ಮತ್ತು ಕೀವ್ ನಡುವಣ ತ್ರಿಪಕ್ಷೀಯ ಮಾತುಕತೆಗಳ ಮೇಲೆ ಕೇಂದ್ರೀಕರಿಸಿದೆ. ಉಕ್ರೇನ್ ಸಂಘರ್ಷವನ್ನು ಇತ್ಯರ್ಥಪಡಿಸುವ ಗುರಿಯನ್ನು ಈ ಮಾತುಕತೆ ಹೊಂದಿದೆ. ಇಬ್ಬರು ಅಧ್ಯಕ್ಷರ ನಡುವಿನ ಸಂಭಾಷಣೆ ವ್ಯವಹಾರಿಕ, ಮುಕ್ತ ಮತ್ತು ರಚನಾತ್ಮಕವಾಗಿತ್ತು ಎಂದು ಉಷಕೋವ್ ಹೇಳಿದ್ದಾರೆ.
ತಡರಾತ್ರಿ ಸಂಭಾಷಣೆ: ಮಧ್ಯರಾತ್ರಿಯೇ ಕ್ರೆಮ್ಲಿನ್ ಪೂಲ್ ವರದಿಗಾರರಿಗೆ ಉಭಯ ನಾಯಕರ ನಡುವಣ ಸಂಭಾಷಣೆಯ ವಿವರವನ್ನು ಉಷಕೋವ್ ನೀಡಿದರು, ಅಧ್ಯಕ್ಷ ಪುಟಿನ್ ಇರಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಗಲ್ಫ್ ರಾಷ್ಟ್ರಗಳ ನಾಯಕರು ಮತ್ತು ಇರಾನಿನ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗಿನ ಕಳೆದ ವಾರದ ಸಂಭಾಷಣೆಗಳ ಕುರಿತು ಟ್ರಂಪ್ ಅವರೊಂದಿಗೆ ಚರ್ಚಿಸಿದರು ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಯಾಗಿ ಟ್ರಂಪ್, ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಈ ವಿಷಯದ ಬಗ್ಗೆ ಬಹಳ ಅರ್ಥಪೂರ್ಣವಾದ ಚರ್ಚೆ ನಡೆಯಿತು ಎಂದು ಉಷಕೋವ್ ಹೇಳಿದರು.
ಇದು ಪುಟಿನ್ ಮತ್ತು ಟ್ರಂಪ್ ಅವರ 11 ನೇ ಫೋನ್ ಸಂಭಾಷಣೆಯಾಗಿದೆ. ಮತ್ತು ಈ ವರ್ಷದ ಮೊದಲನೆ ದೂರವಾಣಿ ಮಾತುಕತೆಯಾಗಿದ್ದು, ಉಭಯ ನಾಯಕರ ನಡುವೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮಾತುಕತೆ ನಡೆದಿತ್ತು ಎಂದು ಉಷಕೋವ್ ತಿಳಿಸಿದರು.
ರಷ್ಯಾದ ಅಧ್ಯಕ್ಷರು ಇಂಧನ ಇಲಾಖೆ ಅಧಿಕಾರಿಗಳ ಉನ್ನತ ಸಭೆ ಕರೆದು ಮಾಸ್ಕೋ ತನ್ನ ಸ್ನೇಹಪರ ರಾಷ್ಟ್ರಗಳಿಗೆ (ಭಾರತ ಮತ್ತು ಚೀನಾ) ವಿಶ್ವಾಸಾರ್ಹ ಪಾಲುದಾರ ಎಂದು ಘೋಷಿಸಿದ ಕೆಲವೇ ಗಂಟೆಗಳ ನಂತರ ಟ್ರಂಪ್ ಪುಟಿನ್‌ಗೆ ಕರೆ ಮಾಡಿದ್ದು ಗಮನಿಸಬೇಕಾದ ಅಂಶವಾಗಿದೆ. ತನ್ನ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ಸಿದ್ಧರಿದ್ದರೆ, ದೀರ್ಘಾವಧಿಯ ಆಧಾರದ ಮೇಲೆ ಯುರೋಪಿಯನ್ ಒಕ್ಕೂಟಕ್ಕೆ ಕಚ್ಚಾ ತೈಲ ಸರಬರಾಜುಗಳನ್ನು ಪುನಾರಂಭಿಸಲು ಸಿದ್ಧ ಇರುವುದಾಗಿ ರಷ್ಯಾ ಘೋಷಿಸಿದೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಜಾಗತಿಕ ತೈಲ ಮತ್ತು ಅನಿಲ ಹರಿವಿನ ಮೇಲೆ ಗಂಭೀರ ಪರಿಣಾಮ ಬೀರುವ ಅಪಾಯವನ್ನು ಹೊಂದಿದೆ ಎಂದು ಪುಟಿನ್ ಇದೇ ವೇಳೆ ಎಚ್ಚರಿಸಿದ್ದಾರೆ. ಇರಾನ್ – ಅಮೆರಿಕ ಇಸ್ರೇಲ್ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಯನ್ನು ವಾಸ್ತವಿಕವಾಗಿ ಮುಚ್ಚಲಾಗಿದೆ. ಇದು ಅಂತಾರಾಷ್ಟ್ರೀಯವಾಗಿ ತೈಲ ಬಿಕ್ಕಟ್ಟು ಸೃಷ್ಟಿಯಾಗುವಂತೆ ಮಾಡಿದೆ.
