ಉದಯವಾಹಿನಿ, ಕಾಶ್ಮೀಂಡು: ನೇಪಾಳ ಸಂಸತ್ ಚುನಾವಣೆಯಲ್ಲಿ ರಾಷ್ಟ್ರೀಯ ಸ್ವತಂತ್ರ ಪಕ್ಷವು (ಆರ್‌ಎಸ್‌ಪಿ) 125 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ‘ನೇರ ಮತದಾನ ವ್ಯವಸ್ಥೆಯ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು, 165 ಕ್ಷೇತ್ರಗಳ ಪೈಕಿ ಆರ್‌ಎಸ್‌ಪಿಯು 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಕ್ಷಗಳು ಪಡೆದಿರುವ ಮತಪ್ರಮಾಣದ ಆಧಾರದಲ್ಲಿ ಸ್ಥಾನ ಹಂಚಿಕೆ ಪ್ರಕ್ರಿಯೆಯು ಮುಂದುವರಿದಿದೆ’ ಎಂದು ಚುನಾವಣಾ ಆಯೋಗ ತಿಳಿಸಿದೆ.
ನೇಪಾಳಿ ಕಾಂಗ್ರೆಸ್ (ಎನ್‌ಸಿ) 18 ಕ್ಷೇತ್ರಗಳಲ್ಲಿ, ಸಿಪಿಎನ್-ಯುಎಂಎಲ್ 9, ನೇಪಾಳಿ ಕಮ್ಯುನಿಸ್ಟ್ ಪಾರ್ಟಿ (ಎನ್‌ಸಿಪಿ) 8, ಶ್ರಮ ಸಂಸ್ಕೃತಿ ಪಕ್ಷವು 3 ಮತ್ತು ರಾಷ್ಟ್ರೀಯ ಪ್ರಜಾತಂತ್ರ ಪಕ್ಷವು (ಆರ್‌ಪಿಪಿ) ಒಂದು ಕ್ಷೇತ್ರದಲ್ಲಿ ವಿಜಯ ಸಾಧಿಸಿದೆ. ಪಕ್ಷೇತರ ಅಭ್ಯರ್ಥಿಯೊಬ್ಬರು ಜಯ ಸಾಧಿಸಿದ್ದಾರೆ. ಸದ್ಯದ ಬೆಳವಣಿಗೆಯನ್ನು ಗಮನಿಸಿದರೆ ಆರ್‌ಎಸ್‌ಪಿ ಸ್ಪಷ್ಟ ಬಹುಮತ ಗಳಿಸುವ ಸಾಧ್ಯತೆ ಇದೆ.
ಮತಪ್ರಮಾಣದ ಆಧಾರದಲ್ಲಿ ಸ್ಥಾನ ಹಂಚಿಕೆ ಮಾಡುವ ವ್ಯವಸ್ಥೆಯಲ್ಲಿ ಆರ್‌ಎಸ್‌ಪಿಯು ಕನಿಷ್ಠ 50 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅಂತಿಮ ಫಲಿತಾಂಶ ಘೋಷಣೆಗೆ ಇನ್ನೂ ಕೆಲ ದಿನ ಬೇಕಾಗಬಹುದು ಎಂದು ಆಯೋಗ ತಿಳಿಸಿದೆ.
275 ಸದಸ್ಯ ಬಲದ ಸಂಸತ್ತಿನಲ್ಲಿ ಬಹುಮತಕ್ಕೆ 138 ಕ್ಷೇತ್ರಗಳ ಅಗತ್ಯವಿದೆ.
ನೇಪಾಳ-ಭಾರತ ಸಂಬಂಧ ವೃದ್ಧಿಗೆ ಬದ್ಧ: ಆರ್‌ಎಸ್‌ಪಿ ಮುಖ್ಯಸ್ಥ
‘ಅಭಿವೃದ್ಧಿ ರಾಜತಾಂತ್ರಿಕತೆ ಮೂಲಕ ನೇಪಾಳ-ಭಾರತ ಸಂಬಂಧವನ್ನು ಬಲಪಡಿಸಲು ಎದುರು ನೋಡುತ್ತಿದ್ದೇನೆ’ ಎಂದು ಆರ್‌ಎಸ್‌ಪಿ ಮುಖ್ಯಸ್ಥರಬಿ ಲಾಮಿಚ್ಚಾನೆ ಅವರು ಹೇಳಿದರು. ‘ಚುನಾವಣೆಯಲ್ಲಿ ಪಕ್ಷವು ಅಭೂತಪೂರ್ವ ಜಯ ಸಾಧಿಸಿದ್ದಕ್ಕೆ ಅಭಿನಂದನೆ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ’ ಎಂದು ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದರು. ‘ಸಾಂಸ್ಕೃತಿಕ ಪ್ರವಾಸೋದ್ಯಮ ಇಂಧನ ವ್ಯಾಪಾರ ಕ್ಷೇತ್ರಗಳಲ್ಲಿ ಪಾಲುದಾರಿಕೆ ಮೂಲಕ ಉಭಯ ದೇಶಗಳ ಸಂಬಂಧವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಲು ನಾವು ಉತ್ಸುಕರಾಗಿದ್ದೇವೆ’ ಎಂದು ಹೇಳಿದರು.
