ಉದಯವಾಹಿನಿ, ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ತೈಲ ಬೆಲೆ 100 ಡಾಲರ್ ದಾಟಿದ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರ ಎರಡು ವಾರಗಳ ಕಾಲ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದು, ಸರ್ಕಾರಿ ಕಚೇರಿಗಳು ವಾರದಲ್ಲಿ ನಾಲ್ಕು ದಿನಗಳ ಕಾಲ ಕಾರ್ಯ ನಿರ್ವಹಿಸುವಂತೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಸೋಮವಾರ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಇಂಧನ ಉಳಿತಾಯ ಕ್ರಮಗಳನ್ನು ಘೋಷಿಸಿದರು. ಈ ಕ್ರಮಗಳ ಭಾಗವಾಗಿ, ಶಾಲೆಗಳನ್ನು ಹದಿನೈದು ದಿನಗಳ ಕಾಲ ಮುಚ್ಚಲಾಗುತ್ತದೆ. ಇಂಧನವನ್ನು ಉಳಿಸಲು ಸರ್ಕಾರಿ ಕಚೇರಿಗಳು ವಾರದಲ್ಲಿ ನಾಲ್ಕು ದಿನ ಕಾರ್ಯನಿರ್ವಹಿಸುತ್ತವೆ. ಈ ನಿಯಮ ಬ್ಯಾಂಕ್‌ಗಳಿಗೆ ಅನ್ವಯಿಸುವುದಿಲ್ಲ ಎಂದರು. ಈ ವಾರ ಮುಗಿದ ಬಳಿಕ ಎಲ್ಲಾ ಶಾಲೆಗಳು ಎರಡು ವಾರಗಳವರೆಗೆ ಮುಚ್ಚಲ್ಪಡುತ್ತವೆ. ಇಂಧನವನ್ನು ಉಳಿಸಲು ಉನ್ನತ ಶಿಕ್ಷಣ ಸಂಸ್ಥೆಗಳು ತಕ್ಷಣವೇ ಆನ್‌ಲೈನ್ ಕ್ಲಾಸ್ ನಡೆಸಬೇಕು ಎಂದು ಸೂಚನೆ ನೀಡಿದರು.
