ಉದಯವಾಹಿನಿ, ಬೆಂಗಳೂರು: ವಿಧಾನಸಭೆಯಲ್ಲಿಂದು ವಾಣಿಜ್ಯ ಎಲ್ಪಿಜಿ ಕೊರತೆ ತೀವ್ರ ಸದ್ದುಗದ್ದಲಕ್ಕೆ ಕಾರಣವಾಯಿತು. ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ಸಾಕ್ಷಿಯಾಯಿತು.ಶೂನ್ಯವೇಳೆಯಲ್ಲಿ LPG ಸಮಸ್ಯೆ ಸಂಬಂಧಿಸಿದಂತೆ ಕುಣಿಗಲ್ ಶಾಸಕ ರಂಗನಾಥ್ ಗಮನ ಸೆಳೆದರು. 900 ರೂ. ಇದ್ದ ಸಿಲಿಂಡರ್ಗೆ 1,800 ರೂ. ಕೊಡಬೇಕಿದೆ. ಸಿಲಿಂಡರ್ ಅಭಾವ ಪರಿಹರಿಸಬೇಕು. ಇದಕ್ಕೆ ಕಾರಣ ಯಾರು, ಯಾರು ಬಗೆಹರಿಸಬೇಕು? ಮೋದಿ ಸರ್ಕಾರದ ದುರ್ಬಲ ವಿದೇಶಾಂಗ ನೀತಿ ಇದಕ್ಕೆ ಕಾರಣ ಅಂತ ಆರೋಪಿಸಿದರು. ಮೋದಿ ಹೆಸರು ಹೇಳುತ್ತಿದ್ದಂತೆ ಸದನದಲ್ಲಿ ಗದ್ದಲ ಉಂಟಾಯಿತು. ಬಿಜೆಪಿ ಸದಸ್ಯರು ರಂಗನಾಥ್ ವಿರುದ್ಧ ಮುಗಿಬಿದ್ದರು.
ಈ ವೇಳೆ, ವಿಪಕ್ಷಗಳ ಮೇಲೆ ತಿರುಗಿ ಬಿದ್ದ ಸಚಿವ ಪ್ರಿಯಾಂಕ್ ಖರ್ಗೆ, ಆರ್ಥಿಕ ನೀತಿ ಏನಾಗಿದೆ? ವಿದೇಶಾಂಗ ನೀತಿ ಏನಾಗಿದೆ? ಮೋದಿ ಅವರು ಎಲ್ಲಿದ್ದಾರೆ? ಏನಾದ್ರೂ ಬಾಯಿ ಬಿಟ್ಟಿದ್ದಾರಾ? ಇಂಡಿಯಾ ಟೀಮ್‌ಗೆ ವಿಶ್ ಮಾಡ್ತಾರೆ, ಈ ವಿಚಾರ ಯಾಕೆ ಮಾತಾಡ್ತಿಲ್ಲ? ಎಸ್ಮಾ ಯಾಕೆ ಜಾರಿ ತಂದಿದ್ದೀರಿ? ಎಂದು ವಾಗ್ದಾಳಿ ನಡೆಸಿದರು.
ಕಲಬುರಗಿಯಲ್ಲಿ ಮಂತ್ರಿಯಾಗಿ ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಬಿಜೆಪಿ ಶಾಸಕರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ಶಾಸಕರ ನಡುವೆ ತೀವ್ರ ವಾಗ್ವಾದ ಉಂಟಾಯಿತು. ಆಗ ಸುನಿಲ್ ಕುಮಾರ್ ಮಧ್ಯಪ್ರವೇಶಿಸಿ, ಯುದ್ಧದ ಸಂದರ್ಭದಲ್ಲಿ ಎಲ್ಲಾ ದೇಶಗಳು ಇದೇ ಸಮಸ್ಯೆ ಎದುರಿಸುತ್ತಿವೆ. ನಮಗೂ ಇದರ ಬಗ್ಗೆ ಆತಂಕವಿದೆ. ಆದರೆ ಈ ಸರ್ಕಾರಕ್ಕೆ ರಾಜ್ಯದಲ್ಲಿರುವ ಅನೇಕ ಸಮಸ್ಯೆ ಬಗೆಹರಿಸುವ ಯೋಗ್ಯತೆ ಇಲ್ಲ. ಕರಾವಳಿಯಲ್ಲಿ ಮರಳು ಸಿಗುತ್ತಿಲ್ಲ, ಪೂರೈಸಲು ನಿಮಗೆ ಯೋಗ್ಯತೆ ಇಲ್ಲ. ಸರ್ವರ್ ಸಮಸ್ಯೆ ಇದೆ, ಅದನ್ನು ಸರಿ ಮಾಡಿದ್ದೀರಾ? ಮಂತ್ರಿಗಳಿಗೆ ಸಮಸ್ಯೆ ಬಗೆಹರಿಸುವ ಯೋಗ್ಯತೆ ಇಲ್ಲ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಯೋಗ್ಯತೆ ಇಲ್ಲ ಎಂದು ತಿರುಗೇಟು ನೀಡಿದರು.
ಯಾರೂ ಆತಂಕಪಡುವುದು ಬೇಡ- ಸಚಿವ ಮುನಿಯಪ್ಪ: ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಉತ್ತರಿಸುತ್ತಾ, ಇರಾನ್-ಇಸ್ರೇಲ್ ಯುದ್ಧ ಆಗುತ್ತಿದೆ. ಪೆಟ್ರೋಲ್, ಗ್ಯಾಸ್ ಬರುತ್ತಿಲ್ಲ. ಮನೆಬಳಕೆ ಸಿಲಿಂಡರ್ಗೆ ಸಮಸ್ಯೆ ಇಲ್ಲ. 28 ದಿನದ ಉಪಯೋಗಕ್ಕೆ ಕೊಡುತ್ತೇವೆ. ಬೇರೆಯ ಉಪಯೋಗವನ್ನು ಸದ್ಯಕ್ಕೆ ನಿಲ್ಲಿಸುತ್ತೇವೆ. ಗ್ಯಾಸ್ ಹೆಚ್ಚು ಖರ್ಚು ಮಾಡುವುದು ಬೇಡ. ಸ್ಟೋರೇಜ್ ಮಾಡುವುದು ಬೇಡ. ಆದರೆ ವಾಣಿಜ್ಯ ಸಿಲಿಂಡರ್ ಸಮಸ್ಯೆ ಇದೆ ಎಂದರು.
ಯಾರೂ ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ. ಆದರೆ ಒಂದು ತಿಂಗಳಿಗೆ ಒಂದು ಕುಟುಂಬಕ್ಕೆ ಒಂದು ಸಿಲಿಂಡರ್ ಕೊಡಲು ತೀರ್ಮಾನ ಮಾಡಲಾಗಿದೆ. ಯುದ್ದ ನಡೆಯುತ್ತಿರುವಾಗ ಎಲ್ಲಾ ಗ್ರಾಹಕರು ಸಹಕರಿಸಬೇಕು. ಹೋಟೆಲ್, ಕಲ್ಯಾಣ ಮಂಟಪದವರು ಎಲ್ಲರೂ ಸಹಕರಿಸಬೇಕು. ಗ್ಯಾಸ್ ವ್ಯರ್ಥ ಮಾಡಬೇಡಿ. ದೇಶದಲ್ಲಿ ಎಲ್ಲಾ ಕಡೆಯೂ ಈ ಸಮಸ್ಯೆ ಆಗಿದೆ ಎಂದು ತಿಳಿಸಿದರು.
ಸ್ಟೋರೇಜ್ ಮಾಡಿದರೆ ಕ್ರಮ: ನಾನು ಬೆಳಗ್ಗೆಯೇ ತೈಲ ಮಾರುಕಟ್ಟೆ ಕಂಪನಿ ಜೊತೆ ಸಭೆ ಮಾಡಿದ್ದೇನೆ. ಇವತ್ತಿನವರೆಗೆ ಸರಬರಾಜು ಸಮಸ್ಯೆ ಇಲ್ಲ. 20.30% ನಮ್ಮ ಸ್ವಂತ ಉತ್ಪಾದನೆ ಇದೆ. 70%ರಷ್ಡು ವಿದೇಶದಿಂದ ಬರಬೇಕು. ಆಯಿಲ್ ತುಂಬಿರುವ ಹಡಗನ್ನು ಬಿಡುತ್ತಿಲ್ಲ. ಸಿಲಿಂಡರ್ 14 ಕೆಜಿ ಇರುತ್ತದೆ. ನಾಲ್ಕು ಜನರ ಕುಟುಂಬಕ್ಕೆ ತಿಂಗಳಿಗೆ ಸಾಕು ಅಂದಿದ್ದಾರೆ. ಗಂಭೀರವಾದ ಪರಿಸ್ಥಿತಿ ಇದೆ. ಯಾರೂ ಆತಂಕಪಡುವ ಸ್ಥಿತಿ ಬೇಡ. ಒಂದು ತಿಂಗಳಿಗೆ ಒಂದು ಸಿಲಿಂಡರ್ ಕೊಡುವ ನಿರ್ಧಾರವಾಗಿದೆ. ಸಿಲಿಂಡರ್ ಸ್ಟೋರೇಜ್ಗೆ ಅವಕಾಶವಿಲ್ಲ. ಒಂದು ವೇಳೆ ಮಾಡಿದರೆ ಕ್ರಮ ಜರುಗಿಸುತ್ತೇವೆ. ವಾಣಿಜ್ಯ ಸಿಲಿಂಡರ್ ಆಸ್ಪತ್ರೆಗೆ ಕೊಡಬೇಕು. ಶಾಲೆಗಳಿಗೆ ನಾವು ಕೊಡಬೇಕು. ಈ ಬಗ್ಗೆ ಪ್ರತಿವಾರ ಸಿಎಸ್ ಸಭೆ ನಡೆಸುತ್ತಾರೆ ಎಂದರು.
