ಉದಯವಾಹಿನಿ, ಮೈಸೂರು: ರೇಷ್ಮೆ ಸೀರೆ ಎಂದರೆ ಮಹಿಳೆಯರಿಗೆ ಒಮ್ಮೆ ಕಣ್ಣು ಅರಳುವುದು ಸಹಜ. ಮನೆಯ ಸಣ್ಣ ಸಮಾರಂಭವಿರಲಿ ಅಥವಾ ಹಬ್ಬ-ಹರಿದಿನ, ಮದುವೆಯಂತಹ ಕಾರ್ಯಕ್ರಮ ಇರಲಿ. ರೇಷ್ಮೆ ಸೀರೆಗೆ ಮಹಿಳೆಯರು ಮೊದಲ ಪ್ರಾಧಾನ್ಯತೆ ನೀಡುತ್ತಾರೆ.
ಒಂದು ಕಾಲದ ಅಜ್ಜಿಯ ಸೀರೆ ಎಂದು ಪ್ರಖ್ಯಾತಿ ಪಡೆದಿದ್ದ ಮೈಸೂರು ರೇಷ್ಮೆ ಸೀರೆಗೆ ಈಗ ಪುಲ್ ಡಿಮ್ಯಾಂಡ್ ಬಂದಿದೆ. ಕಾರಣ ಏನಿರಬಹುದು?. ಈ ಸೀರೆಯ ವೈಶಿಷ್ಟತೆ ಏನು?. ಇದನ್ನು ಹೇಗೆ ತಯಾರಿಸಲಾಗುತ್ತದೆ?. ಈ ರೇಷ್ಮೆ ಸೀರೆಗೂ ಮೈಸೂರು ರಾಜ ಮನೆತನಕ್ಕೂ ಇರುವ ಸಂಬಂಧ ಏನು? ಎಂಬ ಸಂಪೂರ್ಣ ಮಾಹಿತಿಯನ್ನು Textile ತಜ್ಞೆ ಶುಭ ಸಂಜೆ ಅರಸು ಈಟಿವಿ ಭಾರತಕ್ಕೆ ವಿವರಿಸಿದ್ದಾರೆ. ಭವ್ಯ ಇತಿಹಾಸ ಹೊಂದಿರುವ ಮೈಸೂರು ಸಿಲ್ಕ್ ಸೀರೆಯ ಕಾರ್ಖಾನೆ ಆರಂಭವಾಗಿದ್ದು 1912ರಲ್ಲಿ. ಅಂದಿನ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 10 ಲೂಮ್ಗಳಿಂದ ಈ ಕಾರ್ಖಾನೆ ಆರಂಭಿಸಿದರು. ಆರಂಭದಲ್ಲಿ ಅರಮನೆಯ ಪ್ರಮುಖರಿಗೆ ಮಾತ್ರ ರೇಷ್ಮೆ ಸೀರೆ ತಯಾರಿಸಲಾಗುತ್ತಿತ್ತು. ಆದರೆ, ನಂತರ ಬೇಡಿಕೆ ಹೆಚ್ಚಾದಾಗ 40 ಲೂಮ್ ಕಾರ್ಖಾನೆಯಾಗಿ ವಿಸ್ತರಿಸಿದರು. ಈ ಕಾರ್ಖಾನೆಯ ಎಲ್ಲ ಯಂತ್ರಗಳನ್ನು ಅಂದು ಸ್ವಿಟ್ಜರ್ಲ್ಯಾಂಡ್ನಿಂದ ತರಿಸಲಾಗಿದ್ದು, ಈಗಲೂ ಚೆನ್ನಾಗಿ ಕೆಲಸ ಮಾಡುತ್ತವೆ ಎಂದು ಶುಭ ಮಾಹಿತಿ ಹಂಚಿಕೊಂಡರು.
ಅಜ್ಜಿ ಸೀರೆ ಏಕೆ?: 1980-2000 ಇಸವಿಯವರಿಗೆ ಕೆಲವೇ ಬಣ್ಣದಲ್ಲಿ ಬರುತ್ತಿದ್ದ ರೇಷ್ಮೆ ಸೀರೆಗಳನ್ನು ಅಂದು 50 ವರ್ಷ ದಾಟಿದ ಮಹಿಳೆಯರು ಮಾತ್ರ ಉಡುತ್ತಿದ್ದರು. ಅದಕ್ಕೆ ಬಲವಾದ ಕಾರಣವೂ ಇದೆ. ಮೈಸೂರು ರೇಷ್ಮೆ ಸೀರೆಯು ಚಳಿಗಾಲದಲ್ಲಿ ಬೆಚ್ಚಗೆ ಹಾಗೂ ಬೇಸಿಗೆಯಲ್ಲಿ ತಂಪಾದ ಅನುಭಾವ ನೀಡುತ್ತದೆ. ಅದಕ್ಕಾಗಿ ಬುದ್ಧಿವಂತ ಅಜ್ಜಿಯರು ಈ ಮೈಸೂರು ರೇಷ್ಮೆ ಸೀರೆಯನ್ನು ಕೊಳ್ಳುತ್ತಿದ್ದರು. ಕಾಲಾನಂತರ ಈ ವಿಚಾರ ಮಹಿಳೆಯರಿಗೆ ಗೊತ್ತಾದಾಗ ಇದಕ್ಕೆ ಬೆಲೆ ಬಂದಿತು ಎಂದು ಶುಭ ಅವರು ರೇಷ್ಮೆ ಸೀರೆಯ ಬೆಲೆ ಹಾಗೂ ಬೇಡಿಕೆ ಕುರಿತು ವಿವರಣೆ ನೀಡಿದರು.
