ಉದಯವಾಹಿನಿ, ಬೆಂಗಳೂರು: ಬೇಸಿಗೆ ರಜಾದಿನಗಳಲ್ಲಿ ಮಕ್ಕಳಿಗೆ ಸೃಜನಾತ್ಮಕ ಹಾಗೂ ಶೈಕ್ಷಣಿಕ ವಾತಾವರಣ ಒದಗಿಸಿ ಅವರ ಪ್ರತಿಭೆ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಬೆಂಗಳೂರು ಕಬ್ಬನ್ ಪಾರ್ಕ್‌ನಲ್ಲಿರುವ ಬಾಲ ಭವನ ಸೊಸೈಟಿ ವತಿಯಿಂದ ವಿಶೇಷ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. 5ರಿಂದ 16 ವರ್ಷದ ಮಕ್ಕಳಿಗಾಗಿ ಈ ವಿಶೇಷ ‘ಸಮರ್ ಕ್ಯಾಂಪ್’ ಆಯೋಜಿಸಲಾಗಿದ್ದು, ಏಪ್ರಿಲ್ 10ರಿಂದ ಮೇ 15ರವರೆಗೆ ನಡೆಯಲಿದೆ. ಸಮರ್ ಕ್ಯಾಂಪಿನಲ್ಲಿ ಚಿತ್ರಕಲೆ, ಹಸ್ತಕಲೆ, ಸ್ಟ್ರೀಟ್ ಡ್ರಾಮಾ, ಮಣ್ಣಿನ ಕಲೆ, ಕರಾಟೆ, ಯೋಗ, ಮೆಹೆಂದಿ, ತಬಲಾ, ವೆಸ್ಟರ್ನ್ ಡ್ಯಾನ್ಸ್ ಸೇರಿದಂತೆ ವಿವಿಧ ಸೃಜನಾತ್ಮಕ ಚಟುವಟಿಕೆಗಳ ಜೊತೆಗೆ ಚಿನ್ನಿ ದಂಡು, ಲಗೋರಿ, ಕಬಡ್ಡಿ ಮುಂತಾದ ಪಾರಂಪರಿಕ ಆಟಗಳ ಪರಿಚಯವನ್ನು ಒದಗಿಸಲಾಗುತ್ತದೆ. ಮಕ್ಕಳಿಗೆ ಅನುಭವಿ ತರಬೇತುದಾರರು ತರಬೇತಿ ನೀಡಲಿದ್ದಾರೆ. ವಿಶೇಷ ಬೇಸಿಗೆ ಶಿಬಿರದಲ್ಲಿ ಭಾಗಿಯಾಗಲು ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಶಿಬಿರದಲ್ಲಿ ಭಾಗಿಯಾಗುವ ಮಕ್ಕಳಿಗೆ ಕಲಿಕೆಗೆ ಅಗತ್ಯ ಸಾಮಗ್ರಿಯನ್ನು ಶಿಬಿರದ ವತಿಯಿಂದಲೇ ನೀಡಲಾಗುತ್ತದೆ. ಈ ಶಿಬಿರದ ಶುಲ್ಕ 1000 ರೂ ಆಗಿದ್ದು, ಆಸಕ್ತ ಮಕ್ಕಳ ಪೋಷಕರು ಅರ್ಜಿ ಸಲ್ಲಿಸಬಹುದು. ಶಿಬಿರದಲ್ಲಿ ಭಾಗಿಯಾಗುವ ಮಕ್ಕಳಿಗೆ ವಿಶೇಷ ವಿನಾಯಿತಿ ಕೂಡ ಇದ್ದು, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅಗತ್ಯ ದಾಖಲೆ ಹೊಂದಿರುವ ದಿವ್ಯಾಂಗ ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ಉಚಿತ ಪ್ರವೇಶ ಹಾಗೂ ಬಾಲ ಭವನದ ಸದಸ್ಯತ್ವ ಹೊಂದಿರುವ ಮಕ್ಕಳಿಗೆ ಶೇ.25ರಷ್ಟು ರಿಯಾಯಿತಿ ನೀಡಲಾಗುತ್ತದೆ.ಮಕ್ಕಳಲ್ಲಿ ಸೃಜನಶೀಲತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಬಾಲ ಭವನ ಸೊಸೈಟಿ ಅಧ್ಯಕ್ಷ ಬಿ.ಆರ್.ನಾಯ್ಡು ತಿಳಿಸಿದ್ದಾರೆ.ಶಿಬಿರಕ್ಕೆ ಅರ್ಜಿ ನಮೂನೆಗಳನ್ನು ಬಾಲ ಭವನ ಸೊಸೈಟಿ, ಕಬ್ಬನ್ ಪಾರ್ಕ್, ಬೆಂಗಳೂರು ಕಚೇರಿಯಲ್ಲಿ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಪಡೆಯಬಹುದು.
