ಉದಯವಾಹಿನಿ, ಬಲಂಗಿರ್​ (ಒಡಿಶಾ): ಒಡಿಶಾದಲ್ಲಿ ಬಿಸಿಲಿನ ತಾಪಮಾನ ಏರುತ್ತಿದ್ದು, ಈ ಸುಡು ಬಿಸಿಲಿನಲ್ಲಿ ವಿದ್ಯಾರ್ಥಿಗಳು ಉರಿ ಬಿಸಿಲಿನಲ್ಲಿ ಶಾಮಿಯಾನದ​ ಕೆಳಗೆ ಕುಳಿತು ಪರೀಕ್ಷೆ ಬರೆದಿದ್ದಾರೆ. ಇದಕ್ಕೆಲ್ಲ ಕಾರಣ ಶಾಲಾ ಕೊಠಡಿಗಳ ಕೊರತೆ.  180 ವಿದ್ಯಾರ್ಥಿಗಳಿರುವ ಈ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿರುವುದು ಕೇವಲ ಎರಡು ಕೊಠಡಿಗಳು ಮಾತ್ರ. ಹೊಸ ತರಗತಿಗಳನ್ನು ನಿರ್ಮಿಸಲಾಗಿದೆ ಎಂಬುದು ದಾಖಲೆಗಳಲ್ಲಿ ಮಾತ್ರವೇ ಇದೆ. ಆದರೆ, ವಾಸ್ತವ ಮಾತ್ರ ಬೇರೆಯದ್ದೇ ಇದೆ. ಹೊಸದಾಗಿ ನಿರ್ಮಿಸಲಾಗಿರುವ ಮೂರು ಕೊಠಡಿಗಳು ವರ್ಷದಿಂದಲೂ ಬಳಕೆ ಮಾಡದೇ ಬೀಗ ಜಡಿಯಲಾಗಿದೆ. ಪರಿಣಾಮವಾಗಿ ವಿದ್ಯಾರ್ಥಿಗಳು ಬಿಸಿಲಿನಲ್ಲಿ ಕುಳಿತು ಪರೀಕ್ಷೆ ಬರೆಯುವಂತೆ ಆಗಿದೆ.

ಮೂಲಗಳ ಪ್ರಕಾರ, ಕೊಠಡಿ ಸಮಸ್ಯೆಗೆ ಪರಿಹಾರ ಸಿಗದೇ ಇರುವ ಕಾರಣದಿಂದ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪೋಷಕರು ಮಕ್ಕಳು ಬಯಲಿನಲ್ಲಿ ಪರೀಕ್ಷೆ ಬರೆಯಲು ಬೇರೊಂದು ಮಾರ್ಗವನ್ನು ಕಂಡುಕೊಂಡಿದ್ದಾರೆ. ಬಯಲಲ್ಲೇ ಶಾಮಿಯಾನ ಹಾಕಿಸಿ ಮಕ್ಕಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದಾರೆ. ಶಾಲೆಯಲ್ಲಿ 180 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಇಷ್ಟೊಂದು ಮಕ್ಕಳ ಕಲಿಕೆಗೆ ಇರುವುದು ಕೇವಲ 2 ಕೊಠಡಿಗಳಷ್ಟೇ. ಇರುವ ಎರಡು ಕೊಠಡಿಗಳಲ್ಲಿ ಪರೀಕ್ಷೆ ಬರೆಸಲು ಸಾಧ್ಯವಿಲ್ಲದ ಕಾರಣ, ಶಿಕ್ಷಕರು ಹಾಗೂ ಪೋಷಕರು ಸೇರಿಕೊಂಡು ಈ ರೀತಿ ಶಾಮಿಯಾನ​ ಬಳಕೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಹೊಸ ಕೊಠಡಿಗಳಿಗೆ ತರಗತಿಗಳನ್ನು ವರ್ಗಾಯಿಸುವಂತೆ ಒತ್ತಾಯಿಸಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಕೊಠಡಿಗಳನ್ನು ಶೀಘ್ರವೆ ನೀಡುವಂತೆ ಅರಿಕೆ ಮಾಡಿಕೊಳ್ಳಲಾಗಿದೆ. ಆದರೆ ನಮ್ಮ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಮುಖ್ಯೋಪಾಧ್ಯಾಯ ಜಯದೇವ್ ಪ್ರಧಾನ್ ಅವರು ತಿಳಿಸಿದ್ದಾರೆ.

ಈ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಮಕ್ಕಳ ಹಾಜರಾತಿಗೆ ತಕ್ಕಂತೆ 7 ಮಂದಿ ಶಿಕ್ಷಕರೂ ಈ ಶಾಲೆಯಲ್ಲಿ ಇದ್ದಾರೆ. ಈ ಎಲ್ಲಾ ಮಕ್ಕಳಿಗೆ ಸಾಮಾನ್ಯ ದಿನಗಳಲ್ಲಿ ಈ ಎರಡು ಕೊಠಡಿಗಳಲ್ಲೇ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. ಆದರೆ, ಪರೀಕ್ಷೆ ಸಮಯದಲ್ಲಿ ಒಟ್ಟಿಗೆ ಕೂರಿಸಿ ಬರೆಸಲು ಸಾಧ್ಯವಿಲ್ಲದ ಕಾರಣ ಶಾಮಿಯಾನ ಹಾಕಿಸಿ ಪರೀಕ್ಷೆ ಬರೆಯಲು ತಾತ್ಕಾಲಿಕವಾದ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳ ನಡುವೆ ಅಂತರವನ್ನು ಕಾಪಾಡುವ ಅವಶ್ಯಕತೆ ಇದ್ದು, ಎಲ್ಲರಿಗೂ ಶಾಲೆಯ ಎರಡು ಕೊಠಡಿಯಲ್ಲಿ ಕೂರುವ ವ್ಯವಸ್ಥೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಟೆಂಟ್​ಗಳನ್ನು ಅಳವಡಿಸಲಾಗಿದೆ. ಆದರೆ ಸುಡು ಬಿಸಿಲು ಇರುವುದರಿಂದ ವಿದ್ಯಾರ್ಥಿಗಳು ತುಸು ಸಂಕಷ್ಟವನ್ನು ಎದುರಿಸಬೇಕಾಯಿತು. ಶಾಲೆಗೆ ಹೆಚ್ಚವರಿಯಾಗಿ ಮೂರು ಕೊಠಡಿಯನ್ನು ನಿರ್ಮಿಸಿ ವರ್ಷಗಳೇ ಕಳೆದಿವೆ. ಆದರೆ ಶಾಲಾ ಅಧಿಕಾರಿಗಳು ತರಗತಿ ನಡೆಸಲು ಅಥವಾ ಬಳಕೆಗೆ ಅವಕಾಶ ಕಲ್ಪಿಸಿಲ್ಲ. ಈ ಕುರಿತು ಸಂಬಂಧಿಸಿದ ಇಲಾಖೆಯ ಗಮನಕ್ಕೂ ತರಲಾಗಿದೆ. ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯನ್ನೂ ಒದಗಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈ ಸಮಸ್ಯೆ ಕುರಿತು ಗಮನ ಹರಿಸುವಂತೆ ಅನೇಕ ಬಾರಿ ಕೋರಲಾಗಿದೆ ಎಂದು ಕೂಡ ಮುಖ್ಯೋಪಾಧ್ಯಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!