ಉದಯವಾಹಿನಿ, ಬಸ್ತಾರ್​ (ಛತ್ತೀಸ್​​ಗಢ): ಭದ್ರತಾ ಪಡೆಗಳು ನಡೆಸುತ್ತಿರುವ ನಕ್ಸಲ್​ ನಿಗ್ರಹ ಕಾರ್ಯಾಚರಣೆಯಲ್ಲಿ ಮತ್ತೊಂದು ದೊಡ್ಡ ಯಶಸ್ಸು ಸಾಧಿಸಲಾಗಿದೆ. ರಾಜ್ಯದ ಬಸ್ತಾರ್​ ಪ್ರದೇಶದಲ್ಲಿ 108 ನಕ್ಸಲರು ಶಸ್ತ್ರತ್ಯಾಗ ಮಾಡಿ, ಶರಣಾಗಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವ ವಿಜಯ್ ಶರ್ಮಾ ಅವರು, “108 ನಕ್ಸಲರು ಪುನರ್ವಸತಿಗೆ ಒಳಗಾಗುತ್ತಿದ್ದಾರೆ. ಇವರಲ್ಲಿ ಆರು ನಕ್ಸಲ್​ ಕಮಾಂಡರ್​ಗಳು, ಮೂರು ಕಂಪನಿ ಪ್ಲಟೂನ್ ಸದಸ್ಯರು ಮತ್ತು 18 ಪಿಪಿಸಿಎಂಗಳು, 23 ಪ್ರದೇಶ ಸಮಿತಿ ಸದಸ್ಯರು ಮತ್ತು 56 ಇತರ ಸದಸ್ಯರು ಇದ್ದಾರೆ. ಇಷ್ಟು ಮಂದಿಯ ತಲೆಗೆ 3.95 ಕೋಟಿ ರೂಪಾಯಿ ಬಹುಮಾನವಿತ್ತು” ಎಂದು ತಿಳಿಸಿದ್ದಾರೆ.

101 ಶಸ್ತ್ರಾಸ್ತ್ರಗಳು ಪತ್ತೆ: “108 ನಕ್ಸಲರ ಶರಣಾಗತಿಯ ಜೊತೆಗೆ, ಆರು ಎಕೆ-47ಗಳು, ಒಂದು ಎಕೆ-47 ಪಿಎಆರ್‌ಜಿ, 11 ಐಎನ್‌ಎಸ್‌ಎಎಸ್ ರೈಫಲ್‌ಗಳು, ಒಂದು ಕಾರ್ಬೈನ್, ಐದು ಎಸ್‌ಎಲ್‌ಆರ್ ರೈಫಲ್‌ಗಳು ಮತ್ತು ಒಂದು ಬಿಜಿಎಲ್ ಸೇರಿದಂತೆ 101 ಶಸ್ತ್ರಾಸ್ತ್ರಗಳನ್ನು ಹಿಂತಿರುಗಿಸುತ್ತಿದ್ದಾರೆ” ಎಂದು ವಿಜಯ್ ಶರ್ಮಾ ಅವರು ಹೇಳಿದ್ದಾರೆ.

“ಇದರ ಜೊತೆಗೆ, ಬಿಜಾಪುರದ ಇಂದ್ರಾವತಿ ನದಿಯ ಬಳಿ ಹೂತಿಟ್ಟಿದ್ದ 3 ಕೋಟಿ 60 ಲಕ್ಷ ರೂಪಾಯಿ ಮತ್ತು 1 ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಬಸ್ತಾರ್ ವಿಭಾಗದ ವ್ಯಾಪ್ತಿಯಲ್ಲಿ 30 ಪ್ರದೇಶ ಸಮಿತಿಗಳು, 26 ಇತರ ಸಮಿತಿ ಸದಸ್ಯರನ್ನು ಶರಣಾಗುವಂತೆ ಮಾಡಲಾಗಿದೆ. ಇನ್ನೂ, 4 ಸಮಿತಿಗಳ ಸದಸ್ಯರ ಮೇಲೆ ನಿಗಾ ಇಡಲಾಗಿದೆ. 2026 ರ ಮಾರ್ಚ್ 31ರ ವೇಳೆಗೆ ಛತ್ತೀಸ್‌ಗಢ ನಕ್ಸಲಿಸಂ ಮುಕ್ತವಾಗಲಿದೆ” ಎಂದು ತಿಳಿಸಿದ್ದಾರೆ.

“ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಒಟ್ಟು 108 ಮಾವೋವಾದಿ ಕಾರ್ಯಕರ್ತರು ಸರ್ಕಾರದ ಪುನರ್ವಸತಿ ಯೋಜನೆಯಡಿ ಜಗದಲ್‌ಪುರದ ಬಸ್ತರ್ ವಿಭಾಗದ ಪ್ರಧಾನ ಕಚೇರಿಯಲ್ಲಿ ಶರಣಾಗುತ್ತಿದ್ದಾರೆ. ಎಲ್ಲ ಈ ಕಾರ್ಯಕ್ರಮ ಪೊಲೀಸ್, ಕೇಂದ್ರ ಭದ್ರತಾ ಪಡೆಗಳ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಸಮ್ಮುಖದಲ್ಲಿ ನಡೆಯಲಿದೆ” ಎಂದು ಬಸ್ತಾರ್ ಐಜಿ ಸುಂದರರಾಜ್ ತಿಳಿಸಿದ್ದರು.

ನಕ್ಸಲ್​ ಮುಕ್ತ ರಾಜ್ಯಕ್ಕೆ 20 ದಿನ ಬಾಕಿ: ಛತ್ತೀಸ್‌ಗಢದ ಬಸ್ತಾರ್‌ನಲ್ಲಿ 4 ದಶಕಗಳಿಂದ ಒಂದಲ್ಲಾ ಒಂದು ಅವಘಡ ಸೃಷ್ಟಿಸುತ್ತಿದ್ದ ಮಾವೋವಾದಿ ಸಂಘಟನೆಯನ್ನು ನಿರ್ಮೂಲನೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾರ್ಚ್ 31ರ ಗಡುವು ನಿಗದಿಪಡಿಸಿದ್ದರು. ಈ ಗಡುವಿನೊಳಗೆ ಎಲ್ಲ ನಕ್ಸಲರನ್ನು ನಿಶ್ಯಸ್ತ್ರೀಕರಣಗೊಳಿಸಲು ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಬಸ್ತಾರ್‌ನಲ್ಲಿ ವಿವಿಧ ತಂತ್ರಗಳೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಒಂದೆಡೆ, ಭದ್ರತಾ ಪಡೆಗಳು ನಕ್ಸಲೀಯರ ಪ್ರಮುಖ ಪ್ರದೇಶಗಳನ್ನು ವಶಕ್ಕೆ ಪಡೆದು ಎದುರು ನಿಂತವರನ್ನು ಎನ್‌ಕೌಂಟರ್‌ ಮಾಡುತ್ತಿದ್ದರೆ, ಮತ್ತೊಂದೆಡೆ ಹೆಚ್ಚಿನ ಸಂಖ್ಯೆಯ ಮಾವೋವಾದಿ ಸದಸ್ಯರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಮರಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!