ಉದಯವಾಹಿನಿ, ರಾಮನಗರ: ಬಜೆಟ್ ನನಗೆ ಸಮಾಧಾನ ತಂದಿಲ್ಲ ಎಂದು ರಾಜ್ಯ ಬಜೆಟ್ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಅಸಮಾಧಾನ ಹೊರಹಾಕಿದ್ದಾರೆ.ರಾಮನಗರದ ಮೊಟ್ಟೆದೊಡ್ಡಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಬಜೆಟ್ ನನಗೆ ಸಮಾಧಾನ ತಂದಿಲ್ಲ. ನನ್ನ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಿಎಂಗೆ ಮನವಿ ಮಾಡಿದ್ದೆ. ಭಕ್ಷಿಕೆರೆ ಒಡೆದು ಪ್ರವಾಹದಿಂದ ಉಂಟಾದ ಸಮಸ್ಯೆ ಬಗ್ಗೆ ಫೋಟೋ ತೋರಿಸಿ ಮಾಹಿತಿ ಕೊಟ್ಟಿದ್ದೆ. ಹಿಂದೆ ಇದ್ದವರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದಿದ್ದಾರೆ.
ರಸ್ತೆ, ಚರಂಡಿ ಹಾಗೂ ನೀರಾವರಿ ಬಗ್ಗೆ ನಾಲ್ಕೈದು ಬಾರಿ ಮನವಿ ಮಾಡಿದ್ದೆ. ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ್ದೆ. ಆದರೆ ಸಿಎಂ ಏನೂ ಮಾಡಲಿಲ್ಲ, ನನಗೆ ನೋವಾಗಿದೆ. ಪಾರದರ್ಶಕವಾಗಿ ಅನುದಾನ ಕೊಡ್ತಾರೆ ಎನ್ನುವ ನಂಬಿಕೆ ಇತ್ತು. ಈಗ ಆ ನಂಬಿಕೆ ಹುಸಿಯಾಗಿದೆ. ಈಗ ನಾವು ಡಿಸಿಎಂ ಹಿಂದೆಯೇ ಹೋಗಬೇಕು. ನಮ್ಮ ಕಷ್ಟ-ಸುಖವನ್ನ ಅವರ ಮೇಲೆಯೇ ಹಾಕಬೇಕು. ಹಿಂದೆ ಅವರಿಂದಲೇ ಅಭಿವೃದ್ಧಿ ಕೆಲಸ ಮಾಡಿಸಿಕೊಂಡಿದ್ದೆ. ಇದು ಅವರ ಜಿಲ್ಲೆ, ಮುಂದೆಯೂ ಅವರ ಮೇಲೆಯೇ ಭಾರ ಹಾಕಬೇಕಾಗುತ್ತೆ. ಕ್ಷೇತ್ರದ ಜವಾಬ್ದಾರಿ ಡಿಸಿಎಂ ಅವರ ಮೇಲೂ ಇದೆ ಎಂದಿದ್ದಾರೆ.ಡಿಸಿಎಂ ಡಿಕೆಶಿ ಸಿಎಂ ಆಗುವ ವಿಚಾರವಾಗಿ, ನಮ್ಮ ಗುರುಗಳು ಜಪದಿಂದ ಇನ್ನೂ ಎದ್ದಿಲ್ಲ. ಬಹುಶಃ ಯುಗಾದಿ ಬಳಿಕ ನಮ್ಮ ಗುರುಗಳು ಎಚ್ಚರ ಆಗ್ತಾರೆ. ಸೆಷನ್ ನಡೆಯುತ್ತಿದೆ, ಯುಗಾದಿ ಬಳಿಕ ಒಳ್ಳೆಯ ಸುದ್ದಿ ಸಿಗುತ್ತೆ. ಡಿಕೆಶಿ ಶ್ರಮಕ್ಕೆ ಒಳ್ಳೆಯ ರಿಸಲ್ಟ್ ಸಿಕ್ಕೇ ಸಿಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
